ಹೊಸದಾಗಿ ಚುನಾಯಿತರಾದ ಗ್ರಾಪಂ ಸದಸ್ಯರಿಗೆ ಐದು ದಿನ ತರಬೇತಿ – ಸಚಿವ ಈಶ್ವರಪ್ಪ

Spread the love

ಹೊಸದಾಗಿ ಚುನಾಯಿತರಾದ ಗ್ರಾಪಂ ಸದಸ್ಯರಿಗೆ ಐದು ದಿನ ತರಬೇತಿ – ಸಚಿವ ಈಶ್ವರಪ್ಪ

ಉಡುಪಿ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಹೊಸದಾಗಿ ಚುನಾಯಿತರಾದ ಗ್ರಾಮ ಪಂಚಾಯತಿ ಸದಸ್ಯರಿಗೆ ಜನವರಿ 19 ರಿಂದ ಮಾರ್ಚ್ 26 ರವರೆಗೆ ತರಬೇತಿ ಕಾರ್ಯಕ್ರಮವನ್ನುಆಯೋಜಿಸಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಅವರು   ನೂತನ ಸದಸ್ಯರಿಗೆ  ತರಬೇತಿ ನೀಡಲಾಗುವುದು, ಇದಕ್ಕಾಗಿ 23.5 ಕೋಟಿ ರೂಪಾಯಿ ವೆಚ್ಚವಾಗಲಿದೆ. ಗ್ರಾಮ ಪಂಚಾಯತ್ ಸದಸ್ಯರಿಗೆ ಐದು ದಿನಗಳ ತರಬೇತಿಯನ್ನು ಆಯೋಜಿಸಲಾಗುವುದು. ಇದಕ್ಕೆ ರಾಜ್ಯ ವ್ಯಾಪಿ 900 ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಲಾಗಿದೆ. ಪ್ರತೀಯೊಬ್ಬ ಗ್ರಾಮ ಪಂಚಾಯತ್ ಸದಸ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳಿಗೆ ಹಾಗೂ ಮುಂದಿನ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಗೆಲುವಿಗೆ ಪಕ್ಷವನ್ನು ಮತ್ತಷ್ಟು ಸಂಘಟಿಸಲು ಬಿಜೆಪಿ ರಾಜ್ಯ ಘಟಕದಿಂದ ‘ಜನಸೇವಕ ಸಮಾವೇಶ’ ಜ.11ರಿಂದ 13ರ ವರೆಗೆ ಏರ್ಪಡಿಸಲಾಗಿದ್ದು ಇದನ್ನು 5 ತಂಡಗಳ ನೇತೃತ್ವದಲ್ಲಿ ನಡೆಸಲಾಗುತ್ತಿದೆ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮಾವೇಶದ ನೇತೃತ್ವ ವಹಿಸಿದ್ದು ಅವರ ಜೊತೆ ತಾನು, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಜಗದೀಶ್ ಶೆಟ್ಟರ್ ಮತ್ತು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ತಂಡ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ ಎಂದರು.

ಈ ಸಮಾವೇಶದಲ್ಲಿ ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರಿಗೆ ತಿಳಿವಳಿಕೆ ಕಾರ್ಯಕ್ರಮ, ಆಡಳಿತ ನಿರ್ವಹಣೆ ಹಾಗೂ ಮುಂದಿನ ಚುನಾವಣೆಗೆ ಸಂಘಟನಾತ್ಮಕವಾಗಿ ಸಿದ್ಧತೆ ಬಗ್ಗೆ ದಿಕ್ಸೂಚಿ ನೀಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಾಯಕರಾದ ಉದಯ್ ಕುಮಾರ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಮಟ್ಟಾರ್ ರತ್ನಾಕರ ಹೆಗ್ಡೆ ಹಾಗೂ ಇತರರು ಉಪಸ್ಥಿತರಿದ್ದರು.


Spread the love