
ಹೊಸಹೊಳಲಲ್ಲಿ ಸಂಭ್ರಮದ ಬ್ರಹ್ಮರಥೋತ್ಸವ
ಕೆ.ಆರ್.ಪೇಟೆ: ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಹೊಯ್ಸಳ ಶಿಲ್ಪಕಲಾ ವೈಭವದ ಹೊಸಹೊಳಲು ಗ್ರಾಮದ ಶ್ರೀಲಕ್ಷ್ಮೀ ನಾರಾಯಣಸ್ವಾಮಿ ದೇವರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ನಡೆಯಿತು.
ತಹಶೀಲ್ದಾರ್ ನಿಸರ್ಗ ಪ್ರಿಯಾ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ್, ದೇವಾಲಯ ಧರ್ಮದರ್ಶಿ ಸಮಿತಿಯ ಸಂಚಾಲಕ ಹೆಚ್.ಆರ್.ಲೋಕೇಶ್, ಸಮಾಜಸೇವಕರಾದ ಹೆಚ್.ಜಿ.ಸೋಮಶೇಖರ್, ಪುರಸಭಾ ಮುಖ್ಯಾಧಿಕಾರಿ ಬಸವರಾಜು ಮತ್ತು ಕಸಬಾ ಹೋಬಳಿಯ ರಾಜಶ್ವನಿರೀಕ್ಷಕ ಹರೀಶ್ ಶ್ರೀ ರಥದಲ್ಲಿ ವಿರಾಜಮಾನವಾಗಿದ್ದ ಶ್ರೀಲಕ್ಷ್ಮೀನಾರಾಯಣಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಪೂಜೆಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ತಹಶೀಲ್ದಾರ್ ನಿಸರ್ಗಪ್ರಿಯ ಮಾತನಾಡಿ ರಥೋತ್ಸವ ಹಾಗೂ ಜಾತ್ರೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸುವುದರಿಂದ ನಮ್ಮ ಸ್ನೇಹ ಭಾಂದವ್ಯಗಳು ವೃದ್ಧಿಯಾಗಿ ದ್ವೇಷ ಅಸೂಯೆಗಳು ಮರೆಯಾಗಿ ಪ್ರೀತಿ ವಿಶ್ವಾಸವು ಮೂಡಲಿದೆ. ಶ್ರೀಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವವು ಅತ್ಯಂತ ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ನಡೆದಿದ್ದು ಲೋಕಕಲ್ಯಾಣಾರ್ಥವಾಗಿ ವಿಶೇಷವಾಗಿ ಪ್ರಾರ್ಥಿಸಲಾಗಿದೆ ಎಂದರು.
ಉಘೇ ಗೋವಿಂದ, ಉಘೇ ಉಘೇ ಶ್ರೀನಿವಾಸ, ಉಘೇ ನಾರಾಯಣ, ಉಘೇ ಉಘೇ.. ವೆಂಕಟರಮಣ ಎಂಬ ಜಯಘೋ?ಗಳು ಮುಗಿಲು ಮುಟ್ಟಿದ್ದವು. ಹೊಸಹೊಳಲು ಗ್ರಾಮದ ಮುಖ್ಯ ಬೀದಿಗಳಲ್ಲಿ ರಥವು ಸಂಚರಿಸಿತು. ಸಾವಿರಾರು ಭಕ್ತರು ಬ್ರಹ್ಮರಥೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿ, ರಥವನ್ನು ಎಳೆದು ಶ್ರೀರಥದ ಕಳಸಕ್ಕೆ ಬಾಳೆಹಣ್ಣು ಜವನವನ್ನು ಎಸೆಯುವ ಮೂಲಕ ಭಕ್ತಿಪೂರ್ವಕ ಸಮರ್ಪಣೆ ಮಾಡಿ ಪುನೀತರಾದರು.
ಹೊಸಹೊಳಲು ಗ್ರಾಮದ ಮುಖಂಡರಾದ ಡಾ.ಶ್ರೀನಿವಾಸಶೆಟ್ಟಿ, ಕುರುಹಿನಶೆಟ್ಟಿ ಸಮಾಜದ ಮುಖಂಡರಾದ ತಮ್ಮಣ್ಣಶೆಟ್ಟಿ, ಪುರಸಭೆ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷೆ ಗಾಯತ್ರಿ, ಸದಸ್ಯರಾದ ಪ್ರವೀಣ್‌ಶೆಟ್ಟಿ, ಕಲ್ಪನಾದೇವರಾಜು, ಹೆಚ್.ಡಿ.ಅಶೋಕ್, ಮುಖಂಡರಾದ ಬಾಳೆಕಾಯಿ ಬಸವೇಗೌಡ, ಚಿಕ್ಕೇಗೌಡ, ರಾಮೇಗೌಡ, ಕೃಷ್ಣೇಗೌಡ, ಕೆ.ಮಂಜುಳಾಚನ್ನಕೇಶವ ಸೇರಿದಂತೆ ಸಾವಿರಾರು ಜನರು ರಥೋತ್ಸವದಲ್ಲಿ ಭಾಗವಹಿಸಿದ್ದರು.