
ಹೊಸ ವರ್ಷಕ್ಕೆ 2ಲಕ್ಷ ಲಡ್ಡು ವಿತರಣೆ
ಮೈಸೂರು: ನೂತನ ವರ್ಷವನ್ನು ಸ್ವಾಗತಿಸಲು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು, ಲೋಕಕಲ್ಯಾಣದೊಂದಿಗೆ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 2 ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತಿದ್ದು, ಹೊಸ ವರ್ಷದಂದು (ಜ.1) ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಿತರಿಸಲಾಗುತ್ತದೆ.
ತಿರುಪತಿ ಮಾದರಿಯ 2 ಲಕ್ಷ ಲಡ್ಡುಗಳು ಈಗಾಗಲೇ ಸಿದ್ಧವಾಗುತ್ತಿದ್ದು, ಜ.1ರಂದು ಬೆಳಗ್ಗೆ 4 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಭಕ್ತಾದಿಗಳಿಗೆ ಲಡ್ಡುಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದೆ.
1994ರಿಂದ ಲಡ್ಡು ವಿತರಿಸುವ ಕಾರ್ಯವನ್ನು ನಡೆಸಿಕೊಂಡು ಬರಲಾಗಿದ್ದು, ಈ ವರ್ಷವೂ ನೂತನ ವರ್ಷಾರಂಭದ ಅಂಗವಾಗಿ ಜ.1ರ ಬೆಳಗ್ಗೆ 4 ಗಂಟೆಯಿಂದ ಪ್ರಾರಂಭಿಸಿ ಶ್ರೀ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಂ, ಮಧುರೆ ಕ್ಷೇತ್ರದಿಂದ ತರಿಸಿರುವ ವಿಶೇಷ ತೋಮಾಲೆ ಮತ್ತು ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ ಸಹಸ್ರನಾಮರ್ಚನೆ ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ ಏಕಾದಶ ಪ್ರಾಕಾರೋತ್ಸವ ಹಾಗೂ 20 ಕ್ವಿಂಟಾಲ್ ಪುಳಿಯೋಗರೆ ನಿವೇದನೆ ಮಾಡಲಾಗುತ್ತಿದ್ದು, ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾಧಿಗಳಿಗೆ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದಾಜು ಎರಡು ಕೆಜಿ ತೂಕದ 10 ಸಾವಿರ ಲಡ್ಡುಗಳು ಹಾಗೂ 150 ಗ್ರಾಂ ತೂಕದ 2 ಲಕ್ಷ ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಲಡ್ಡು ಪ್ರಸಾದವನ್ನು ವಿಶೇಷವಾಗಿ 60 ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದ್ದು, ಡಿ.21ರಿಂದ ಪ್ರಾರಂಭಿಸಿ 31ರವರೆಗೂ ಲಡ್ಡು ತಯಾರಿ ಕಾರ್ಯ ನಡೆಯಲಿದೆ.
ಲಡ್ಡು ತಯಾರಿಕೆಗೆ 75 ಕ್ವಿಂಟಾಲ್ ಕಡ್ಲೆಹಿಟ್ಟು, 200 ಕಿಂಟಾಲ್ ಸಕ್ಕರೆ, 6ಸಾವಿರ ಲೀಟರ್ ಖಾದ್ಯ ತೈಲ, 200 ಕೆ.ಜಿ ಗೋಡಂಬಿ, 200 ಕೆ.ಜಿ ಒಣದ್ರಾಕ್ಷಿ, 100ಕೆ.ಜಿ ಬಾದಾಮಿ, 500 ಕೆ.ಜಿ ಡೈಮಂಡ್ ಸಕ್ಕರೆ, ಸಾವಿರ ಕೆ.ಜಿ ಬೂರಾ ಸಕ್ಕರೆ, 20 ಕೆ.ಜಿ ಪಿಸ್ತಾ, 50 ಕೆ.ಜಿ ಏಲಕ್ಕಿ, 40ಕೆ.ಜಿ ಜಾಕಾಯಿ ಮತ್ತು ಜಾಪತ್ರೆ, 10 ಕೆ.ಜಿ, ಪಚ್ಚೆ ಕರ್ಪೂರ, 100 ಕೆ.ಜಿ ಲವಂಗಗಳನ್ನು ಬಳಸಿ ತಯಾರಿಸಲಾಗಿದೆ.