ಹೋಳಿ ಪ್ರಯುಕ್ತ ರಂಗ್ ದೇ ಬರ್ಸಾ ಹೆಸರಿನ ಡಿಜೆ ಪಾರ್ಟಿಗೆ ಬಜರಂಗ ದಳ ಕಾರ್ಯಕರ್ತರಿಂದ ದಾಳಿ

Spread the love

ಹೋಳಿ ಪ್ರಯುಕ್ತ ರಂಗ್ ದೇ ಬರ್ಸಾ ಹೆಸರಿನ ಡಿಜೆ ಪಾರ್ಟಿಗೆ ಬಜರಂಗ ದಳ ಕಾರ್ಯಕರ್ತರಿಂದ ದಾಳಿ

ಮಂಗಳೂರು: ಇಲ್ಲಿನ ಕಂಕನಾಡಿ ಠಾಣಾ ವ್ಯಾಪ್ತಿಯ ಮರೋಳಿಯಲ್ಲಿ ಹೋಳಿ ಪ್ರಯುಕ್ತ ರಂಗ್ ದೇ ಬರ್ಸಾ ಹೆಸರಿನ ಡಿಜೆ ಪಾರ್ಟಿಗೆ ಬಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ರವಿವಾರ ನಡೆದಿದೆ.

ಮರೋಳಿಯ ‘ಸೂರ್ಯ ವುಡ್ಸ್ ‘ನಲ್ಲಿ ಅರ್ಜುನ್ ಎಂಬವರು ಹೋಳಿ ಆಚರಣೆಗೆ ಅನುಮತಿ ಪಡೆದಿದ್ದರು.  ಕಾರ್ಯಕ್ರಮದಲ್ಲಿ ಅಶ್ಲೀಲ ಕುಣಿತ ನಡೆಯುತ್ತಿತ್ತು ಎನ್ನಲಾಗಿದ್ದು, ಈ ವೇಳೆ ಬಜರಂಗ ದಳ ಕಾರ್ಯಕರ್ತರಿಂದ ಕಾರ್ಯಕ್ರಮಕ್ಕೆ ದಾಳಿ ನಡೆಸಿ ಅಡ್ಡಿಪಡಿಸಿದ್ದಾರೆಂದು ವರದಿಯಾಗಿದೆ.

ಭಾನುವಾರ ಮಧ್ಯಾಹ್ನ ಕೆಲ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹೋಳಿ ಆಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಬಜರಂಗದಳದವರು ದಾಳಿ ನಡೆಸಿ ಅಡ್ಡಿಪಡಿಸಿದರು. ಕಾರ್ಯಕ್ರಮದ ಕುರಿತು ಅಳವಡಿಸಿದ್ದ ಬ್ಯಾನರ್ ಗಳನ್ನು ಹರಿದು ಹಾಕಿದರು. ವಿದ್ಯಾರ್ಥಿಗಳು ತುಂಡುಡುಗೆ ತೊಟ್ಟಿದ್ದಕ್ಕೆ ಹಾಗೂ ಧ್ವನಿವರ್ಧಕ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕಾರ್ಯಕ್ರಮ ಆಯೋಜಕರು ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ಮಾತಿನ ಚಕ್ಕಮಕಿಯು ನಡೆಯಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಒಟ್ಟು 6 ಮಂದಿ ಹೋಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದರು. ನಾವು ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತಿದ್ದೇವೆ. ಕೆಲವು ಪೋಸ್ಟರ್ ಗಳಿಗೆ ಹಾನಿಯಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಹೇಳಿದ್ದಾರೆ.


Spread the love