ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರ 64ನೇ ಜನ್ಮದಿನ: ಕತಾರ್ ಕನ್ನಡಿಗರಿಂದ ಶುಭಾಶಯ, ದಶಕದ ನೆನಪುಗಳ ಮೆಲುಕು
ದೋಹಾ, ಕತಾರ್: ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರ 64ನೇ ಜನ್ಮದಿನದ ಅಂಗವಾಗಿ ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿ, ಕಳೆದ ಒಂದು ದಶಕದ ಸವಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸುಮಾರು ಹತ್ತು ವರ್ಷಗಳ ಹಿಂದೆ ಡಾ. ಶಿವರಾಜ್ ಕುಮಾರ್ ಅವರು ಮೊದಲ ಬಾರಿಗೆ ಕತಾರ್‌ಗೆ ಭೇಟಿ ನೀಡಿ, ಕರ್ನಾಟಕ ಸಂಘ ಕತಾರ್ ಆಯೋಜಿಸಿದ್ದ ವಾರ್ಷಿಕ ವಿಶೇಷ ‘ಕರ್ನಾಟಕ ರಾಜ್ಯೋತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರ ಆಗಮನವು ಕತಾರ್‌ನ ಕನ್ನಡಿಗರಲ್ಲಿ ಅಪಾರ ಸಂಭ್ರಮವನ್ನುಂಟು ಮಾಡಿತ್ತು.
ನಂತರ ‘ಲೀಡರ್’ ಚಿತ್ರದ ಚಿತ್ರೀಕರಣದ ನಿಮಿತ್ತ ಮತ್ತೊಮ್ಮೆ ದೋಹಾಗೆ ಆಗಮಿಸಿದ ಅವರು, ಕನ್ನಡ ಚಿತ್ರರಂಗದ ಹಿರಿಮೆಯನ್ನು ವಿದೇಶದಲ್ಲಿಯೂ ಮೆರೆದಿದ್ದರು.
ಅದೇ ಸಂದರ್ಭದಲ್ಲಿ, ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಜನ್ಮದಿನದಂದು ಅವರ ನಿವಾಸಕ್ಕೆ ಭೇಟಿ ನೀಡಿ, ತಮ್ಮ ಸಾನ್ನಿಧ್ಯದ ಮೂಲಕ ವಿಶೇಷ ಉಡುಗೊರೆಯನ್ನೇ ನೀಡಿದಂತಾಗಿತ್ತು. ಆ ಭೇಟಿ ಮೂಲಕ ತಮ್ಮ ಸರಳತೆ, ಆತ್ಮೀಯತೆ ಹಾಗೂ ಅಭಿಮಾನಿಗಳ ಮೇಲಿನ ಅಪಾರ ಪ್ರೀತಿಯನ್ನು ಶಿವಣ್ಣ ಅವರು ಮತ್ತೊಮ್ಮೆ ಪ್ರತಿಬಿಂಬಿಸಿದ್ದರು ಎಂದು ಶ್ರೀ ಹೆಬ್ಬಾಗಿಲು ಸ್ಮರಿಸಿದರು.
ಈಗ ಕರ್ನಾಟಕ ಸಂಘ ಕತಾರ್ ಅಧ್ಯಕ್ಷರಾಗಿರುವ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು, ಶಿವರಾಜ್ ಕುಮಾರ್ ಅವರ 64ನೇ ಜನ್ಮದಿನದ ಸಂಭ್ರಮದ ಸಂದರ್ಭದಲ್ಲಿ ಆ ಸವಿ ನೆನಪುಗಳನ್ನು ಮೆಲುಕು ಹಾಕುತ್ತಾ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಮಾತೃವಿಯೋಗ, ಪ್ರೀತಿಯ ತಮ್ಮ ಡಾ. ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನ ಹಾಗೂ ತಮ್ಮ ಆರೋಗ್ಯದ ಸಮಸ್ಯೆಗಳ ಕಾರಣದಿಂದ ಶಿವಣ್ಣ ಅವರು ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಆ ಸಂದರ್ಭಗಳು ಅಭಿಮಾನಿಗಳಿಗೂ ಬೇಸರವನ್ನುಂಟು ಮಾಡಿದ್ದವು.
ಆದರೆ, ಈ ವರ್ಷ ಆರೋಗ್ಯದಲ್ಲಿ ಚೇತರಿಕೆ ಕಂಡು, ಎಂದಿನ ಉತ್ಸಾಹದಿಂದ ತಮ್ಮ ಜನ್ಮದಿನವನ್ನು ಆಚರಿಸುತ್ತಿರುವುದು ಕನ್ನಡಿಗರಿಗೆ ಸಂತಸದ ವಿಷಯವಾಗಿದೆ. ಮತ್ತೆ ಅದೇ ಚೈತನ್ಯದಿಂದ ಅಭಿಮಾನಿಗಳನ್ನು ರಂಜಿಸಲು ಶಿವಣ್ಣ ಸಜ್ಜಾಗಿರುವುದು ಎಲ್ಲರಲ್ಲೂ ಹರ್ಷ ಮೂಡಿಸಿದೆ.
“ವಿಶ್ವದಾದ್ಯಂತ ಇರುವ ಕನ್ನಡಿಗರ ಪ್ರೀತಿ, ಹಾರೈಕೆಗಳು ಹಾಗೂ ಭಗವಂತ, ಗುರು-ಹಿರಿಯರ ಆಶೀರ್ವಾದ ಸದಾ ಡಾ. ಶಿವರಾಜ್ ಕುಮಾರ್ ಮತ್ತು ಅವರ ಕುಟುಂಬದವರ ಮೇಲೆ ಇರಲಿ. ಅವರ ಜೀವನ ಸುಖ, ಸಮೃದ್ಧಿ ಹಾಗೂ ಸಂತೋಷದಿಂದ ಕೂಡಿರಲಿ” ಎಂದು ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಶುಭ ಹಾರೈಸಿದ್ದಾರೆ.