Home Mangalorean News Kannada News ₹7.60 ಲಕ್ಷ ಮೌಲ್ಯದ 76.59 ಗ್ರಾಂ ಎಂಡಿಎಂಎ, ಗಾಂಜಾ ವಶ: ಓರ್ವ ಆರೋಪಿ ಸೆರೆ, ಮತ್ತೋರ್ವ...

₹7.60 ಲಕ್ಷ ಮೌಲ್ಯದ 76.59 ಗ್ರಾಂ ಎಂಡಿಎಂಎ, ಗಾಂಜಾ ವಶ: ಓರ್ವ ಆರೋಪಿ ಸೆರೆ, ಮತ್ತೋರ್ವ ಪರಾರಿ

Spread the love

₹7.60 ಲಕ್ಷ ಮೌಲ್ಯದ 76.59 ಗ್ರಾಂ ಎಂಡಿಎಂಎ, ಗಾಂಜಾ ವಶ: ಓರ್ವ ಆರೋಪಿ ಸೆರೆ, ಮತ್ತೋರ್ವ ಪರಾರಿ

ಬೆಳ್ತಂಗಡಿ: ಸುಮಾರು ₹7.60 ಲಕ್ಷ ಮೌಲ್ಯದ 76.59 ಗ್ರಾಂ ಎಂಡಿಎಂಎ (MDMA) ಹಾಗೂ 27 ಗ್ರಾಂ ಗಾಂಜಾ ವಶಪಡಿಸಿಕೊಂಡಿರುವ ಬೆಳ್ತಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ.

ಜುಲೈ 29ರಂದು ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಆನಂದ ಎಂ ಹಾಗೂ ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದಲ್ಲಿ KA-18-A-7203 ಸಂಖ್ಯೆಯ ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ತಡೆದು ವಿಚಾರಣೆ ನಡೆಸಿದರು. ಆತ ಬೆಳ್ತಂಗಡಿ ಕುವೆಟ್ಟು ನಿವಾಸಿ ತ್ವಲಹ್ ಯಾನೆ ಅನ್ವರ್ ಯಾನೆ ಅನ್ಸರ್ (21) ಎಂದು ಗುರುತಿಸಲ್ಪಟ್ಟಿದ್ದಾನೆ.

ಆರೋಪಿಯ ತಪಾಸಣೆ ವೇಳೆ ಆತನ ಬಳಿ 27 ಗ್ರಾಂ ಗಾಂಜಾ ಹಾಗೂ ಒಂದು ಮೊಬೈಲ್ ಫೋನ್ ಪತ್ತೆಯಾಗಿದೆ. ಬಳಿಕ ಸ್ಥಳದಲ್ಲಿದ್ದ ಆಟೋ ರಿಕ್ಷಾ ಹಾಗೂ KA-21-MA-4990 ಸಂಖ್ಯೆಯ ಕಾರನ್ನು ಪರಿಶೀಲಿಸಿದಾಗ ಸುಮಾರು ₹7.60 ಲಕ್ಷ ಮೌಲ್ಯದ 76.59 ಗ್ರಾಂ ತೂಕದ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಪತ್ತೆಯಾಗಿದೆ.

ವಿಚಾರಣೆ ವೇಳೆ ಮಾದಕ ವಸ್ತು ನೀಡಲು ಬಂದಿದ್ದ ಅಮ್ಜತ್ ಖರಾರ್ ಎಂಬ ಮತ್ತೋರ್ವ ಆರೋಪಿ ತಾನು ತಂದಿದ್ದ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 82/2026ರಡಿ ಎನ್‌ಡಿಪಿಎಸ್ ಕಾಯ್ದೆಯ ಕಲಂ 8(c), 20(b)(ii)(A), 22(c) ಹಾಗೂ 27A ಅನ್ವಯ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.


Spread the love

Exit mobile version