ಅಂಗಾರಗುಡ್ಡೆ ದರೋಡೆ ಯತ್ನ ಪ್ರಕರಣ: ಇಬ್ಬರು ಆರೋಪಿಗಳು ವಶ, ಒಬ್ಬ ಪರಾರಿ
ಮುಲ್ಕಿ: ಮುಲ್ಕಿ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆಯಲ್ಲಿ ನಡೆದ ದರೋಡೆ ಯತ್ನ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇನ್ನೊಬ್ಬ ಆರೋಪಿಯು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣದ ಬಳಿಕ, ಆರೋಪಿಗಳಲ್ಲಿ ಒಬ್ಬನು ತಾನು ಬಲಿಯಾಗಿದ್ದೇನೆ ಎಂಬಂತೆ ತೋರಿಸಲು ಆಸ್ಪತ್ರೆಗೆ ತೆರಳಿ ಎಂಎಲ್‌ಸಿ (MLC) ದಾಖಲಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಆದರೆ, ಘಟನೆಗೆ ಸಂಬಂಧಿಸಿದಂತೆ ಕೆಲವರು ಸ್ಥಳದಲ್ಲೇ ವಿಡಿಯೋಗ್ರಫಿ ನಡೆಸಿದ್ದು, ಆ ದೃಶ್ಯಗಳ ಆಧಾರದಲ್ಲಿ ಘಟನೆ ಹೇಗೆ ನಡೆದಿದೆ ಎಂಬುದು ಒಂದು ಮಟ್ಟಿಗೆ ಸ್ಪಷ್ಟವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈವರೆಗೆ ಲಭ್ಯವಾದ ಮಾಹಿತಿಯ ಪ್ರಕಾರವೇ ಈ ವಿವರಗಳು ತಿಳಿದುಬಂದಿದ್ದು, ಎಲ್ಲಾ ವಿಡಿಯೋ ದೃಶ್ಯಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಇನ್ನಷ್ಟು ಸತ್ಯಾಂಶಗಳು ಹೊರಬರುವ ಸಾಧ್ಯತೆ ಇದೆ. ಅದರ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ, ವಶದಲ್ಲಿರುವ ಇಬ್ಬರು ಆರೋಪಿಗಳ ವಿರುದ್ಧ ಹಿಂದೆಂದಿನಿಂದಲೇ ಗಂಭೀರ ಸ್ವರೂಪದ ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮುಂದುವರಿಸಲಾಗುತ್ತಿದೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆ ಪ್ರದೇಶದಲ್ಲಿ ದರೋಡೆ ಯತ್ನ ನಡೆದಿರುವ ಘಟನೆ ವರದಿಯಾಗಿದೆ. ಆರೋಪಿಗಳು ಪಕ್ಕದ ಗ್ರಾಮದವರಾಗಿದ್ದು, ಅಬು ಬಕರ್ ಅವರಿಂದ ಹಣ ವಸೂಲಿ ಮಾಡುವ ಉದ್ದೇಶದಿಂದ ಸ್ಥಳಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಅಬು ಬಕರ್ ಅವರ ಬಳಿ ಮೂರು ಜೋಡಿ ಎಮ್ಮೆ, ಐದು ಹಾಲು ಕೊಡುವ ಹಸುಗಳು ಹಾಗೂ ಇತರ ಜಾನುವಾರುಗಳು ಇದ್ದು, ಇತ್ತೀಚೆಗೆ ಅವರ ಎಮ್ಮೆಗಳು ಕಂಬಳ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದವು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ಹಣ ವಸೂಲಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ದರೋಡೆ ಯತ್ನದ ವೇಳೆ ಆರೋಪಿಗಳು ಅಬು ಬಕರ್ ಅವರ ತಂದೆ ಶಮ್ಶುದ್ದೀನ್ ಅವರ ಮೇಲೆ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಅಬು ಬಕರ್ ಮಧ್ಯಪ್ರವೇಶಿಸಿ ತಂದೆಯನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ.
ಘಟನೆ ನಡೆದ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಸಮುದಾಯದವರು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದು, ಈ ಘಟನೆಯ ಬಳಿಕ ಪಕ್ಕದ ಹಿಂದೂ ಗ್ರಾಮಸ್ಥರು ಅಬು ಬಕರ್ ಕುಟುಂಬದ ಬೆಂಬಲಕ್ಕೆ ನಿಂತಿದ್ದಾರೆ. ಅವರುಗಳು ಮುಲ್ಕಿ ಪೊಲೀಸ್ ಠಾಣೆಗೆ ಆಗಮಿಸಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
ಗ್ರಾಮಸ್ಥರ ದೂರು ಆಧಾರದಲ್ಲಿ ಮುಲ್ಕಿ ಪೊಲೀಸರು ಪ್ರಕರಣ ದಾಖಲಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.
ಪರಾರಿಯಾಗಿರುವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಬೆಳವಣಿಗೆಗಳನ್ನು ಗಮನಿಸಲಾಗುತ್ತಿದೆ.
