Home Mangalorean News Kannada News ಅಧಿಕಾರ ನೀಡದೆ ವಿಶ್ವಕರ್ಮ ಸಮುದಾಯಕ್ಕೆ ಅಭಿವೃದ್ಧಿ ಹೇಗೆ ಸಾಧ್ಯ : ನೇರಂಬಳ್ಳಿ ರಮೇಶ್ ಆಚಾರ್ಯ

ಅಧಿಕಾರ ನೀಡದೆ ವಿಶ್ವಕರ್ಮ ಸಮುದಾಯಕ್ಕೆ ಅಭಿವೃದ್ಧಿ ಹೇಗೆ ಸಾಧ್ಯ : ನೇರಂಬಳ್ಳಿ ರಮೇಶ್ ಆಚಾರ್ಯ

Spread the love

ಅಧಿಕಾರ ನೀಡದೆ ವಿಶ್ವಕರ್ಮ ಸಮುದಾಯಕ್ಕೆ ಅಭಿವೃದ್ಧಿ ಹೇಗೆ ಸಾಧ್ಯ : ನೇರಂಬಳ್ಳಿ ರಮೇಶ್ ಆಚಾರ್ಯ

ಉಡುಪಿ  : ನಮ್ಮ ವಿಶ್ವಕರ್ಮ ಸಮುದಾಯಕ್ಕೆ ಬಿಜೆಪಿ ಸರ್ಕಾರದಿಂದ ನಾವು ನಿರೀಕ್ಷೆ ಮಾಡಿದಷ್ಟು ಅನುಕೂಲಗಳು ಸಿಕ್ಕಿಲ್ಲ. ಕೊರೋನಾ ಸಂಕಷ್ಟದಲ್ಲಾಗಲಿ, ಸಾಲಗಾರರ ಸಾಲ ಮನ್ನಾ ಮಾಡುವ ವಿಚಾರದಲ್ಲಾಗಲಿ, ಬಜೆಟ್ ನಲ್ಲಿ ಪ್ಯಾಕೇಜ್ ಮಾಡುವ ಸಮಯದಲ್ಲಾಗಲಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ನೀಡುವ ಅನುದಾನದಲ್ಲಾಗಲಿ, ವಿಶ್ವಕರ್ಮ ಯುವಕ ಯುವತಿಯರಿಗೆ ಉದ್ಯೋಗ ಕೊಡುವ ವಿಚಾರದಲ್ಲಾಗಲಿ, ನಮ್ಮ ವಿಶ್ವಕರ್ಮ ಸಮಾಜವನ್ನು ಉಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ನಿಟ್ಟಿನಲ್ಲಾಗಲಿ, ರಾಜಕೀಯ ಶಕ್ತಿಯನ್ನು ನೀಡುವ ವಿಚಾರವಾಗಲಿ ನಮ್ಮ ನಿರೀಕ್ಷೆಯಲ್ಲಿ ಆಗಲಿಲ್ಲ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಉಡುಪಿ ಜಿಲ್ಲಾ ಮುಖಂಡ ನೇರಂಬಳ್ಳಿ ರಮೇಶ್ ಆಚಾರ್ಯ ವಿಷಾದ ವ್ಯಕ್ತ ಪಡಿಸಿದರು.

ಅವರು ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗದಲ್ಲೇ ವಿಶ್ವಕರ್ಮ ಸಮುದಾಯದ ರಾಜ್ಯಾಧ್ಯಕ್ಷ ಕೆ.ಪಿ ನಂಜುಂಡಿ ಅವರು ಒಂದು ವಿಶೇಷ ಸ್ಥಾನಮಾನ ಕೊಟ್ಟು ಎಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾಯಕರನ್ನಾಗಿ ಮಾಡಿ 1000 ಸಾವಿರ ಕೋಟಿ ವಿಶೇಷ ಅನುದಾನ ನೀಡಿ ವಿಶ್ವಕರ್ಮ ಸಮುದಾಯದ ಜೊತೆಗೆ ಇತರ ಹಿಂದುಳಿದ ವರ್ಗಗಳ ಸಮುದಾಯವನ್ನು ಸಂಪೂರ್ಣ ಅಭಿವೃದ್ಧಿಗೆ ಕೆ.ಪಿ ನಂಜುಂಡಿ ಅವರನ್ನು ಮುಖ್ಯಸ್ಥರಾಗಿ ಮಾಡಿ ನಾಯಕತ್ವದ ಜೊತೆಗೆ ನೆರವು ನೀಡುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪವನವರು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. ಆದರೆ ಮುಖ್ಯಮಂತ್ರಿ ಹಾಗೂ ಪಕ್ಷ ನುಡಿದಂತೆ ನಡೆಯಲಿಲ್ಲ. ಕೇವಲ ವಿಧಾನ ಪರಿಷತ್ ಸದಸ್ಯರ ಗೌರವ ಸ್ಥಾನ ನೀಡಿದ್ದಾರೆ. ಅಧಿಕಾರ ನೀಡದೇ ಗೌರವ ನೀಡಿದರೆ ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ಹೇಗೆ ಮಾಡಲು ಸಾಧ್ಯ.

ನಮ್ಮ ಕುಲಕಸುಬುಗಳನ್ನು ಉಳಿಸುವ ನಿಟ್ಟಿ ಯೋಜನೆ ರೂಪಿಸಿ ಕೌಶಲ್ಯಗಳಿರುವ ಯುವ ಸಮುದಾಯದ ಕೈಗೆ ಉದ್ಯೋಗ ನೀಡಿ, ಧರ್ಮ, ರಾಜಕೀಯದ ಕೆಲಸಗಳಿಗೆ ಯುವಕರನ್ನು ಬಳಸಿಕೊಂಡು ಕೈಬಿಡಬೇಡಿ ಉದ್ಯೋಗ ನೀಡಿ. ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗ ಕೊಡಿಸಿ, ಯುವಕರ ಭವಿಷ್ಯ ಹಾಳಾಗಲು ಅವಕಾಶ ನೀಡಬೇಡಿ. ವಿಶ್ವಕರ್ಮ ಸಮುದಾಯದ ರಾಜ್ಯಾಧ್ಯಕ್ಷ ಕೆ.ಪಿ ನಂಜುಂಡಿಯವರು ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಸಂಚಾರ ಮಾಡಿ ಸರ್ಕಾರದಿಂದ ಆಗಿರುವ ಅನ್ಯಾಯದ ಬಗ್ಗೆ ವಿಶ್ವಕರ್ಮ ಸಮಾಜದ ಮಂದಿಗೆ ಮನವರಿಕೆ ಮಾಡಿಕೊಡುವ ಜೊತೆಗೆ ಸಮಾಜದ ಸಂಘಟನೆಯನ್ನು ಇನ್ನಷ್ಟು ಪ್ರಬಲಬಾಗಿ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಯಶಸ್ವಿ ಸಂಘಟನೆ ಆದ ಬಳಿಕ ಸುಮಾರು 4 ರಿಂದ 5 ಲಕ್ಷ ಜನ ಸೇರಿಸಿ ಬೃಹತ್ ಸಮಾವೇಶ ಮಾಡುತ್ತೇವೆ. ಸರ್ಕಾರಕ್ಕೆ ನಾವು ಕೇಳುವುದು ಇಷ್ಟೇ ಗೌರವದ ಸ್ಥಾನಮಾನ ಸಾಕು ನಮಗೆ ಅಧಿಕಾರದ ಶಕ್ತಿ ನೀಡಿ ಎಂದರು.

ಉಡುಪಿ ಜಿಲ್ಲಾ ವಿಶ್ವಕರ್ಮ ಮಹಾಸಭಾದ ಯುವ ಸಂಘಟನೆಯ ಮುಖಂಡ ರಾಮಕೃಷ್ಣ ಆಚಾರ್ಯ ಕೋಟ ಮಾತನಾಡಿ, ಮೊದಲ ಹಂತವಾಗಿ ಉಸ್ತುವಾರಿಗಳ ಮೂಲಕ ಸಂಘಟನೆಯ ಚಟುವಟಿಕೆ ಆರಂಭಸಿದ್ದೇವೆ. ವಿಶ್ವಕರ್ಮ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ಶ್ರೀನಿವಾಸ ಆಚಾರ್ಯ ಮಳವಳ್ಳಿ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮದಲ್ಲಿ ಯುವ ಮತ್ತು ಮಹಿಳಾ ಘಟಕಗಳ ರಚನೆಗಾಗಿ ಸಮಾಲೋಚನೆ ಮಾಡುತ್ತಿದ್ದಾರೆ. ವಿಶ್ವಕರ್ಮ ಯುವಕರು ಸೇರಿ ಎಲ್ಲರಿಗೂ ಸ್ಥಾನಮಾನ ನೀಡುವ ಮೂಲಕ ಸಂಘಟನೆಗೆ ಒತ್ತು ನೀಡುತ್ತೇವೆ. ನಿರ್ಲಕ್ಷಿತವಾದ ನಮ್ಮ ಸಮಾಜಕ್ಕೆ ರಾಜಕೀಯ ಶಕ್ತಿ ಬೇಕು ಅಷ್ಟೇ ಅಲ್ಲದೇ ಅಧಿಕಾರದ ಶಕ್ತಿಯೂ ಬೇಕು, ಆ ನಿಟ್ಟಿನಲ್ಲಿ ನಾವು ರಾಜ್ಯ ಸಂಘಟನೆ ಜೊತೆಗೆ ಜಿಲ್ಲೆ ಸಂಘಟನೆಯವರು ಕೈ ಜೋಡಿಸಿದ್ದೇವೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಮುಖಂಡರಾದ ಎಚ್. ರಮೇಶ್ ಆಚಾರ್ಯ ಹೆಬ್ರಿ, ಗಂಗಾಧರ ಆಚಾರ್ಯ ಬಾರ್ಕೂರು, ರಾಜೇಶ್ ಆಚಾರ್ಯ ಬೈಂದೂರು, ಎಚ್. ಸುಶಾಂತ್ ಆಚಾರ್ಯ ಬೈಂದೂರು ಇದ್ದರು.


Spread the love

Exit mobile version