Home Mangalorean News Kannada News ಅನ್ನಬ್ರಹ್ಮನ ಸನ್ನಿಧಿಯಲ್ಲಿ ಗರ್ಜಿಸುತ್ತಿವೆ ತರಹೇವಾರಿ ಹುಲಿಗಳು!

ಅನ್ನಬ್ರಹ್ಮನ ಸನ್ನಿಧಿಯಲ್ಲಿ ಗರ್ಜಿಸುತ್ತಿವೆ ತರಹೇವಾರಿ ಹುಲಿಗಳು!

Spread the love

ಅನ್ನಬ್ರಹ್ಮನ ಸನ್ನಿಧಿಯಲ್ಲಿ ಗರ್ಜಿಸುತ್ತಿವೆ ತರಹೇವಾರಿ ಹುಲಿಗಳು!

ಉಡುಪಿ: ರಥ ಬೀದಿಯ ತುಂಬಾ ಜನ ಸಾಗರ, ವಿವಿಧ ವೇಷಗಳ ಕುಣಿತದ ಸಂಭ್ರಮ,  ಇದಕ್ಕೆಲ್ಲಾ ಕಾರಣ ಉಡುಪಿಯಲ್ಲಿ ಸೆ.13 ಮತ್ತು 14 ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಮಹೋತ್ವದದ ಸಂಭ್ರಮ. ನಗರದಾದ್ಯಂತ ವಿವಿಧ ರೀತಿಯ ವೇಷಗಳೊಂದಿಗೆ ಗರ್ಜಿಸುತ್ತೇವೆ ಹುಲಿವೇಷ ತಂಡಗಳು. ಉಡುಪಿ – ಮಲ್ಪೆ ಸುತ್ತಮುತ್ತಲಿನ ಪರಿಸರದಲ್ಲಿ ಅಬ್ಬರಿಸುವ ಹುಲಿವೇಷದ ಡೋಲು – ತಾಸೆಯ ಸದ್ದು ಮಾತ್ರ ಕಿವಿಗಳಲ್ಲಿ ಇನ್ನೂ ಪ್ರತಿಧ್ವನಿಸುತ್ತಿದೆ.ಅದು ಹುಲಿ ವೇಷ ಮಾಡುವ ಮೋಡಿ.

ಈ ಬಾರಿ ಉಡುಪಿಯ ಆಸುಪಾಸಿನ 30ಕ್ಕೂ ಅಧಿಕ ತಂಡಗಳು ಅಷ್ಟಮಿಯ ಸಂದರ್ಭ ಹುಲಿವೇಷ ಧರಿಸಿ ಭಕ್ತರನ್ನು ರಂಜಿಸುತ್ತಿವೆ. ಅದರಲ್ಲೂ ಅಷ್ಟಮಿಯ  ಸಂಭ್ರಮೋತ್ಸವದಲ್ಲಿ ಮಾರ್ಪಳ್ಳಿಯ ಶ್ರೀ ಮಹಾಲಿಂಗೇಶ್ವರ ಚೆಂಡೆ ಬಳಗದ ಸದಸ್ಯರು ಹುಲಿವೇಷ ಧರಿಸಿ ಭಕ್ತರನ್ನು ರಂಜಿಸುತ್ತಿದ್ದಾರೆ.

ಚೆಂಡೆ ವಾದನದಲ್ಲಿ ರಾಜ್ಯ, ಹೊರರಾಜ್ಯಗಳಲ್ಲಿ ಪ್ರಸಿದ್ಧಿ ಪಡೆದಿರುವ ಮಾರ್ಪಳ್ಳಿಯ ಶ್ರೀ ಮಹಾಲಿಂಗೇಶ್ವರ ಚಂಡೆ ಬಳಗದವರು ಉಡುಪಿಯ ಶ್ರೀ ಕೃಷ್ಣಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಮಹೋತ್ಸವದ ಪ್ರಯುಕ್ತ 13 ವರ್ಷಗಳಿಂದ ಹುಲಿವೇಷ ಧರಿಸುತ್ತಿದ್ದಾರೆ.

ಪ್ರತಿ ವರ್ಷ ಮೈ ನವಿರೇಳಿಸುವಂತಹ ಆಕರ್ಷಕ ಕಸರತ್ತುಗಳ ಮೂಲಕ, ಸಾಂಪ್ರದಾಯಿಕ ಹುಲಿ ನರ್ತನದ ಮೂಲಕ ವಿವಿಧ ಪ್ರಶಸ್ತಿಗಳನ್ನು ಪಡೆದಿದೆ. ಅಲ್ಲದೆ ಈ ತಂಡವು ಉಡುಪಿಯ ಅಷ್ಟ ಮಠಾಧೀಶರಿಂದಲೂ ಸಾರ್ವಜನಿಕರಿಂದಲೂ ಶಿಸ್ತಿನಿಂದ ಕೂಡಿದ ತಂಡ ಎಂಬ ಪ್ರಶಂಸೆಗೆ ಪಾತ್ರವಾಗಿದೆ.

ಈ ಬಾರಿಯ ಅಷ್ಟಮಿಗೆ ಮಕ್ಕಳೂ ಸೇರಿದಂತೆ ಒಟ್ಟು 19 ಜನರು ಹುಲಿವೇಷ ಧರಿಸುತ್ತಿದ್ದಾರೆ. ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯಿಂದ ಒಂದೂವರೆ ತಿಂಗಳ ಮೊದಲೇ ಕೊರಂಗ್ರಪಾಡಿಯ ಮನಮೋಹನ್ ಎಂಬುವವರ ಮಾರ್ಗದರ್ಶನದಲ್ಲಿ ಹುಲಿವೇಷಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಾರೆ. ಚೆಂಡೆ ವಾದನ ಮತ್ತು ಹುಲಿವೇಷದಿಂದ ಸಂಗ್ರಹವಾಗುವ ಮೊತ್ತವನ್ನು  ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ.

ಇದಲ್ಲದೆ ಇತರ ಹಲವಾರು ಹುಲಿವೇಷ ತಂಡಗಳು ನಗರದಾದ್ಯಂತ ತಮ್ಮ ಪ್ರದರ್ಶನ ನೀಡುತ್ತಿದ್ದು ಎಲ್ಲಾ ತಂಡಗಳು ಸೆ. 14 ರಂದು ಸಂಜೆ ರಥಬೀದಿಯಲ್ಲಿ ನಡೆಯುವ ವಿಟ್ಲಪಿಂಡಿಯ ಸಂಭ್ರಮದಲ್ಲಿ ಭಾಗವಹಿಸುತ್ತವೆ. ಬಳಿಕ ಎಲ್ಲಾ ತಂಡಗಳು ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ತಮ್ಮ ಪ್ರದರ್ಶನ ನೀಡಲಿದ್ದು, ಎಲ್ಲಾ ಹುಲಿವೇಷ ತಂಡಗಳಿಗೆ ಶಿರೂರು ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಯವರು ನೋಟಿನ ಮಾಲೆಗಳನ್ನು ತಯಾರು ಮಾಡಿದ್ದು ಪ್ರದರ್ಶನದಲ್ಲಿ ಸ್ವತಃ ಸ್ವಾಮೀಜಿಗಳು ತಂಡಗಳಿಗೆ ಮಾಲೆ ತೊಡಿಸಿ ಗೌರವಿಸಲಿದ್ದಾರೆ.

ಶ್ರೀಕೃಷ್ಣ ಜನ್ಮಾಷ್ಟಮಿಗಾಗಿ ಉಡುಪಿ ರಥಬೀದಿಗಳು ಬಣ್ಣ ಬಣ್ಣದ ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿದೆ. ಬುಧವಾರ ಶ್ರೀಕೃಷ್ಣನಿಗೆ ಪರ್ಯಾಯಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮಂದ್ಯರಾತ್ರಿ 12.34 ಕ್ಕೆ ಅರ್ಘ್ಯ ಪ್ರದಾನ ಮಾಡಲಿದ್ದು, ಮಠವನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿದೆ. ಗುರುವಾರ ಮಹಾ ಅನ್ನ ಸಂತರ್ಪಣೆ ನಡೆಯಲಿದೆ.

ಬರುವ ಭಕ್ತಾದಿಗಳಿಗೆ ವಿತರಿಸಲು ಸಹಸ್ರಾರು ಉಂಡೆ,ಚಕ್ಕುಲಿಗಳನ್ನು ತಯಾರಿಸಲಾಗಿದೆ. ವಿಟ್ಲಪಿಂಡಿ ಉತ್ಸವಕ್ಕೆ ಭರದ ತಯಾರಿ ನಡೆದಿದ್ದು, ರಥಬೀದಿಯಲ್ಲಿ ಕಮಾನುಗಳನ್ನು ನಿರ್ಮಿಸಿ ಮೊಸರು ಕುಡಿಕೆ ಕಟ್ಟಲಾಗಿದೆ.ಗುರುವಾರ ರಥೋತ್ಸವ ಸಾಗಿ ಬರುವ ವೇಳೆ ಮೊಸರು ಕುಡಿಕೆ ಒಡೆಯಲಾಗುತ್ತದೆ. ಮೆರವಣಿಗೆಯಲ್ಲಿ ಹುಲಿವೇಷ ಹಾಗೂ ವಿವಿಧ ಕಲಾತಂಡಗಳು ಭಾಗವಹಿಸಿ ಮೆರಗು ನೀಡಲಿದ್ದು, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಎಲ್ಲ ಎಂಟು ದ್ವಾರಗಳಲ್ಲಿಯೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ವಿಶೇಷ ಭದ್ರತೆ ಒದಗಿಸಲಾಗಿದೆ.


Spread the love

Exit mobile version