ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿದ ಆರೋಪ: 47 ವರ್ಷದ ವ್ಯಕ್ತಿ ಬಂಧನ
ಬಂಟ್ವಾಳ: 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪರಿಚಿತ ವ್ಯಕ್ತಿಯೊಬ್ಬರು ಹಿಂಬಾಲಿಸುತ್ತಿದ್ದ ಕುರಿತು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣದ ಪಿರ್ಯಾದಿದಾರ ಮಹಿಳೆಯ 16 ವರ್ಷದ ಪುತ್ರಿ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಕೆಲ ದಿನಗಳಿಂದ ಮಧ್ಯವಯಸ್ಕ ಅಪರಿಚಿತ ವ್ಯಕ್ತಿಯೊಬ್ಬರು ಬಾಲಕಿಯನ್ನು ಬಸ್ಸಿನಲ್ಲಿ ಪ್ರಯಾಣಿಸುವಾಗ ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ.
ಆಗಸ್ಟ್ 19, 2026ರಂದು ಸಂಜೆ ಬಾಲಕಿ ಕಲ್ಲಡ್ಕ ಬಸ್ ನಿಲ್ದಾಣಕ್ಕೆ ಬಂದಾಗ, ಅದೇ ಅಪರಿಚಿತ ವ್ಯಕ್ತಿ ಅಲ್ಲಿಯೂ ಬಾಲಕಿಯನ್ನು ಗಮನಿಸುತ್ತಿರುವುದು ಕಂಡುಬಂದಿದೆ. ಇದರಿಂದ ಭಯಗೊಂಡ ಬಾಲಕಿ, ತನ್ನ ತಾಯಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ವಿಷಯ ತಿಳಿಸಿದ್ದಾಳೆ.
ಬಳಿಕ ಪಿರ್ಯಾದಿದಾರ ಮಹಿಳೆ ತನ್ನ ಕಚೇರಿ ಮಾಲೀಕರೊಂದಿಗೆ ಬಸ್ ನಿಲ್ದಾಣಕ್ಕೆ ತೆರಳಿದಾಗ, ಆರೋಪಿತ ವ್ಯಕ್ತಿ ಅಲ್ಲಿಯೇ ಇದ್ದನು. ಆತನನ್ನು ವಿಚಾರಿಸಿದಾಗ ತನ್ನ ಹೆಸರು ಜಯಂತ್ ಎಂದು ತಿಳಿಸಿ ಅಲ್ಲಿಂದ ತೆರಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 116/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 78 ಹಾಗೂ ಪೋಕ್ಸೋ ಕಾಯ್ದೆ-2012ರ ಕಲಂ 12ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು.
ತನಿಖೆಯ ವೇಳೆ ಆರೋಪಿತನಾದ ಬಂಟ್ವಾಳ ತಾಲೂಕಿನ ಸರಪಾಡಿ ನಿವಾಸಿ ಜಯಂತ್ (47) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.