Home Mangalorean News Kannada News ಅಮಾಸೆಬೈಲು: ಹುಲ್ಲು ತರಲು ಹೋದ ಯುವತಿ ಕಾಲು ಜಾರಿ ಅಣೆಕಟ್ಟಿಗೆ ಬಿದ್ದು ಮೃತ್ಯು

ಅಮಾಸೆಬೈಲು: ಹುಲ್ಲು ತರಲು ಹೋದ ಯುವತಿ ಕಾಲು ಜಾರಿ ಅಣೆಕಟ್ಟಿಗೆ ಬಿದ್ದು ಮೃತ್ಯು

Spread the love

ಅಮಾಸೆಬೈಲು: ಹುಲ್ಲು ತರಲು ಹೋದ ಯುವತಿ ಕಾಲು ಜಾರಿ ಅಣೆಕಟ್ಟಿಗೆ ಬಿದ್ದು ಮೃತ್ಯು

ಕುಂದಾಪುರ: ದನಗಳಿಗೆ ಹುಲ್ಲು ತರಲು ಹೋಗಿದ್ದ ಯುವತಿ ಮರಳಿ ಮನೆಗೆ ಬರುವಾಗ ಕಾಲು ಜಾರಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯ ಜಂಬೆಹಾಡಿ ಎಂಬಲ್ಲಿ ನಡೆದಿದೆ.

ಜಡ್ಡಿನಗದ್ದೆಯ ಜಂಬೆಹಾಡಿ ಸಂಜೀವ ನಾಯ್ಕ ಮತ್ತು ನರ್ಸಿ ದಂಪತಿಯ ಪುತ್ರಿ ಮೂಕಾಂಬಿಕಾ (23) ಮೃತ ಯುವತಿ. ಮೂಕಾಂಬಿಕಾ ಅವರು ಅಮಾಸೆಬೈಲಿನ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪಾಳಿ ಮಧ್ಯಾಹ್ನದ ಬಳಿಕ ಇದ್ದುದರಿಂದ ಬೆಳಗ್ಗೆ ಹುಲ್ಲು ತರಲು ಅತ್ತಿಗೆ ಅಶ್ವಿನಿ ಅವರೊಂದಿಗೆ ತೋಟಕ್ಕೆ ಹೋಗಿದ್ದರು. ಮನೆಗೆ ಹಿಂದಿರುಗುವಾಗ ಅಶ್ವಿನಿ ಅವರು ಹುಲ್ಲಿನ ಹೊರೆಯನ್ನು ಹೊತ್ತುಕೊಂಡು ಮನೆಯ ಕಡೆಗೆ ಹೊರಟಿದ್ದು, ಮೂಕಾಂಬಿಕಾ ಅವರನ್ನು ಹಿಂಬಾಲಿಸುತ್ತಿದ್ದರು. ಮನೆ ತಲುಪಿದ ಅಶ್ವಿನಿ ಅವರು ಹಿಂದಿರುಗಿ ನೋಡಿದಾಗ ಮೂಕಾಂಬಿಕಾ ಜೊತೆಗೆ ಇರಲಿಲ್ಲ. ಅವರನ್ನು ಕರೆಯುತ್ತ ಪುನಃ ತೋಟದ ಕಡೆಗೆ ಹೋಗಿ ನೋಡಿದಾಗ ಅಣೆಕಟ್ಟಿನ ದಂಡೆಯ ಮೇಲೆ ಹುಲ್ಲು ಕೊಯ್ಯುವ ಕತ್ತಿ ಕಾಣಿಸಿದೆ. ಮನೆಯವರು ಓಡಿ ಬಂದು ಅಣೆಕಟ್ಟಿನಲ್ಲಿ ಹುಡುಕಿದಾಗ ಮೃತದೇಹ ಪತ್ತೆಯಾಗಿದೆ.

ತೋಟದಿಂದ ಹುಲ್ಲನ್ನು ತೆಗೆದುಕೊಂಡು ಕಿಂಡಿ ಅಣೆಕಟ್ಟಿನ ದಂಡೆಯ ಮೇಲೆ ನಡೆದುಕೊಂಡು ಬರುತ್ತಿರುವಾಗ ಜೋರಾಗಿ ಗಾಳಿ ಮಳೆ ಬರುತ್ತಿದ್ದು ಮೂಕಾಂಬಿಕಾ ಕಾಲುಜಾರಿ ಆಕಸ್ಮಿಕವಾಗಿ ಕಿಂಡಿ ಅಣೆಕಟ್ಟಿನ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಅಮಾಸೆಬೈಲು ಠಾಣೆಯ ಎಸ್‌ಐ ಅಶೋಕ ಕುಮಾರ್, ಅಮಾಸೆಬೈಲು ವಿಎಒ ಚಂದ್ರಶೇಖರ ಮೂರ್ತಿ, ಪಿಡಿಒ ಸ್ವಾಮಿನಾಥ್, ಗ್ರಾ.ಪಂ. ಸದಸ್ಯ ಚಂದ್ರ ಶೆಟ್ಟಿ ಮೊದಲಾದವರು ಭೇಟಿ ನೀಡಿದರು.

ಮೂಕಾಂಬಿಕಾ ತಾಯಿ ನರ್ಸಿ ಅವರು ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version