Home Mangalorean News Kannada News ಅ.1:ಮಿಥುನ್ ರೈ ನೇತೃತ್ವದ ಪಿಲಿನಲಿಕೆ ಪ್ರತಿಷ್ಠಾನದ ದಶಮ ಸಂಭ್ರಮ ಸ್ಪರ್ಧೆ ಪಿಲಿನಲಿಕೆ -10

ಅ.1:ಮಿಥುನ್ ರೈ ನೇತೃತ್ವದ ಪಿಲಿನಲಿಕೆ ಪ್ರತಿಷ್ಠಾನದ ದಶಮ ಸಂಭ್ರಮ ಸ್ಪರ್ಧೆ ಪಿಲಿನಲಿಕೆ -10

Spread the love

ಅ.1:ಮಿಥುನ್ ರೈ ನೇತೃತ್ವದ ಪಿಲಿನಲಿಕೆ ಪ್ರತಿಷ್ಠಾನದ ದಶಮ ಸಂಭ್ರಮ ಸ್ಪರ್ಧೆ ಪಿಲಿನಲಿಕೆ -10

ಮಂಗಳೂರು: ಈ ಬಾರಿ ಅ.1ರಂದು ನಡೆಯಲಿರುವ ‘ಪಿಲಿನಲಿಕೆ ಪಂಥ- 10’ಕ್ಕೆ ಕರಾವಳಿ ಉತ್ಸವ ಮೈದಾನ ಸಜ್ಜುಗೊಳ್ಳುತ್ತಿದೆ ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪಿಲಿನಲಿಕೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಗಳಿಗೂ 20 ನಿಮಿಷ ಕಾಲಾವಕಾಶ ನೀಡಲಾಗುವುದು.ಆ.1ರಂದು ಬೆಳಗ್ಗೆ 10ಗಂಟೆಗೆ ಆರಂಭವಾಗುವ ಸ್ಪರ್ಧೆ ರಾತ್ರಿ 10ರವರೆಗೆ ನಡೆಯಲಿದೆ. ಈ ಸ್ಪರ್ಧೆ ವಿಶ್ವಕ್ಕೆ ತುಳುನಾಡಿನ ಸಾಂಪ್ರದಾಯಿಕ ಪಿಲಿನಲಿಕೆಯನ್ನು ನವರಾತ್ರಿಯ ಶಿಷ್ಟಾಚಾರದೊಂದಿಗೆ ಪರಿಚಯಿಸುವ ಮುಖ್ಯ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆ ಆಗಿದೆ ಎಂದರು.

ಪಿಲಿನಲಿಕೆ ಪಂಥ ಸ್ಪರ್ಧೆಗೆ ಅಂತಿಮವಾಗಿ ಅಗಸ್ತ್ಯ ಮಂಗಳೂರು, ಶ್ರೀ ವೈದ್ಯನಾಥೇಶ್ವರ ಫ್ರೆಂಡ್ಸ್ ಟೈಗರ್. ಮುಳಿಹಿತ್ತು ಗೇಮ್ಸ್ ಟೀಮ್, ಅನಿಲ್ ಕಡಂಬೆಟ್ಟು, ಜೂನಿಯರ್ ಬಾಯ್ಸ್ ಚಿಲಿಂಬಿ, ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್, ಟ್ಯಾಲೆಂಟ್ ಟೈಗರ್ಸ್ ತುಳುನಾಡು, ಸೋಮೇಶ್ವರ ಫ್ರೆಂಡ್ಸ್,ಪೊಳಲಿ ಟೈಗರ್ಸ್, ಗೋಕರ್ಣ ನಾಥ ಹುಲಿ ತಂಡಗಳು ಭಾಗವಹಿಸಲಿವೆ ಎಂದರು.

ಈ ಬಾರಿ 10ತಂಡಗಳನ್ನು ಪಿಲಿನಲಿಕೆ -10ಕ್ಕೆ ಆಯ್ಕೆ ಮಾಡಲಾಗಿದೆ. ವಿಶೇಷವಾಗಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಉದ್ಘಾಟಿಸಲಿದ್ದಾರೆ. ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ಸಚಿವ ಗುಂಡೂರಾವ್ ಸೇರಿದಂತೆ ಸಂಸದರು, ಶಾಸಕರು ಆಗಮಿಸಲಿದ್ದಾರೆ ಎಂದು ಮಿಥುನ್ ರೈ ತಿಳಿಸಿದ್ದಾರೆ.

2025ರ ‘ಪಿಲಿನಲಿಕೆ-10’ ಸ್ಪರ್ಧೆಯಲ್ಲಿ ಒಟ್ಟು 20 ಲಕ್ಷರೂ,ಬಹುಮಾನ ನಿಗದಿಪಡಿಸಲಾಗಿದೆ. ಪ್ರಥಮ ಬಹುಮಾನ 10 ಲಕ್ಷ ರೂ. ಮತ್ತು ಫಲಕ, ಪ್ರತಿ ತಂಡಕ್ಕೆ 50ಸಾವಿರ ರೂ. ಗೌರವ ಧನ ನೀಡಲಾಗುವುದು. ಕಪ್ಪುಹುಲಿ, ಮರಿಹುಲಿ, ತಾನೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ಸೇರಿದಂತೆ 6 ವೈಯಕ್ತಿಕ ಪ್ರಶಸ್ತಿಗಳಿಗೆ 50ಸಾವಿರ ಬಹುಮಾನ ಹಾಗೂ ಫಲಕ ಸಿಗಲಿದೆ.

ಪಿಲಿನಲಿಕೆ ಪಂಥಕ್ಕೆ ಈ ಬಾರಿ ದಶಮ (ಹತ್ತು) ಸಂಭ್ರಮ ಹಿನ್ನೆಲೆಯಲ್ಲಿ ಮೂಡುಬಿದಿರೆ ಸರಕಾರಿ ತಾಲೂಕಿನ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ.

ಸಮಾರಂಭದಲ್ಲಿ ಸಹಕಾರಿ ರತ್ನ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾ‌ರ್ ಅವರಿಗೆ ಗೌರವ ಸನ್ಮಾನ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಶಿವಶರಣ್ ಶೆಟ್ಟಿ ನೇತೃತ್ವದ ನಮ್ಮ ಟಿವಿ ಸಹಭಾಗಿತ್ವ ವಹಿಸುತ್ತಿದ್ದಾರೆ. ಈ ಬಾರಿ ಸೆಲೆಬ್ರಿಟಿಗಳ ದಂಡೇ ಪಿಲಿನಲಿಕೆ ಪಂಥಕ್ಕೆ ಆಗಮಿಸಲಿದೆ. ಸಿನಿಮಾ ನಟರಾದ ಸುನೀಲ್ ಶೆಟ್ಟಿ, ಕಿಚ್ಚ ಸುದೀಪ್, ಪೂಜಾ ಹೆಗ್ಡೆ, ರಾಜ್ ಬಿ. ಶೆಟ್ಟಿ, ಕ್ರಿಕೆಟ್ ತಾರೆಗಳಾದ ಅಂಜಿಕ್ಯ ರಹಾನೆ, ಜಿತೇಶ್ ಶರ್ಮಾ, ಇಂಡಿಯನ್ ಬಾಕ್ಸರ್ ವಿಜೇಂದರ್ ಸಿಂಗ್, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸಿನಿಮಾ, ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಏಕಕಾಲಕ್ಕೆ 25 ಸಾವಿರಕ್ಕೂ ಅಧಿಕ ಮಂದಿಗೆ ಕುಳಿತುಕೊಂಡು ಸ್ಪರ್ಧೆ ವೀಕ್ಷಿಸಲು ಆಸನ ವ್ಯವಸ್ಥೆ ಮಾಡಲಾಗುವುದು ಎಂದರು.

ಸುದ್ದಿ ಗೋಷ್ಠಿಯಲ್ಲಿ ಪ್ರತಿಷ್ಠಾನದಸಲಹೆ ಗಾರರಾದ ಶಿವ ಶರಣ್ ಪ್ರಧಾನ ಕಾರ್ಯದರ್ಶಿ ವಿಕಾಸ್ ಶೆಟ್ಟಿ, ಪದಾಧಿ ಕಾರಿಗಳಾದ ಅನಿಲ್ ಪೂಜಾರಿ,ಆನಂದ ರಾಜ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.


Spread the love

Exit mobile version