Home Mangalorean News Kannada News “ಆಯುಷ್ ಪೌಷ್ಟಿಕ ಆಹಾರ ಸಪ್ತಾಹ” ಕಾರ್ಯಕ್ರಮ  

“ಆಯುಷ್ ಪೌಷ್ಟಿಕ ಆಹಾರ ಸಪ್ತಾಹ” ಕಾರ್ಯಕ್ರಮ  

Spread the love

“ಆಯುಷ್ ಪೌಷ್ಟಿಕ ಆಹಾರ ಸಪ್ತಾಹ” ಕಾರ್ಯಕ್ರಮ  

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಗಳೂರು ನಗರ, ಆಯುಷ್ ಫೌಂಡೇಶನ್ ದಕ್ಷಿಣ ಕನ್ನಡ ಹಾಗೂ ಬೋಳೂರು ಯುನೈಟೆಡ್ ಸ್ಪೋಟ್ರ್ಸ್ ಕ್ಲಬ್ ಇವರ ಸಹಭಾಗಿತ್ವದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಮಂಗಳೂರಿನ ಬೋಳೂರು ಸುಲ್ತಾನ್ ಬತ್ತೇರಿ ಅಂಗನವಾಡಿ ಕೇಂದ್ರದಲ್ಲಿ ಸೆಪ್ಟಂಬರ್ 4 ರಂದು ನಡೆಯಿತು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಮೊಹಮ್ಮದ್ ಇಕ್ಬಾಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯುಷ್ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ವೆನ್ಲಾಕ್ ಆಯುಷ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯು ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ.

ಆಯುಷ್ ವತಿಯಿಂದ “ಸಮೃದ್ಧಿ”. ಹಾಗೂ ಮಕ್ಕಳಿಲ್ಲದ ದಂಪತಿಗಳಿಗೆ “ಸೃಷ್ಟಿ” ಎಂಬ ಎರಡು ಪ್ರಮುಖ ಯೋಜನೆಗಳು ಕೇಂದ್ರ ಆಯುಷ್ ಮಂತ್ರಿಗಳಿಂದ ಚಾಲನೆ ಪಡೆದಿದ್ದು ವೆನ್ಲಾಕ್ ಆಯುಷ್ ಹೊರರೋಗಿ ವಿಭಾಗದಲ್ಲಿ ಸೇವೆ ಪಡೆಯಬಹುದಾಗಿದೆ ಎಂದರು.

ಆಯುಷ್ ಫೌಂಡೇಶನ್ ಉಪಾಧ್ಯಕ್ಷ ಆಯುರ್ವೇದ ವೈದ್ಯ ಡಾ.ದೇವದಾಸ್ ಪ್ರಸ್ತಾವನೆಗೈದು ಆಯುಷ್ ವೈದ್ಯ ಪದ್ಧತಿಗಳ ಪ್ರಯೋಜನಗಳನ್ನು ಸಮಾಜಮುಖಿ ಚಿಂತನೆಯ ಯೋಜನೆಗಳ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಪ್ರಯತ್ನ ಆಯುಷ್ ಫೌಂಡೇಶನ್ ವತಿಯಿಂದ ನಡೆಯುತ್ತಿದೆ. ಅಪೌಷ್ಟಿಕತೆಗೆ ಇಂದಿನ ಜೀವನ ಶೈಲಿಯಲ್ಲಿ ಅಕಾಲಿಕ, ಅನಿಯಮಿತ ,ಅಸಮರ್ಪಕ ಆಹಾರ ಸೇವನೆ, ಹಾಗೂ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಪೌಷ್ಟಿಕಾಂಶ ಕೊರತೆ ಕಂಡುಬರುತ್ತವೆ. ಆಯುರ್ವೇದದಲ್ಲಿ ತಿಳಿಸಿದ ದಿನಚರ್ಯ, ಋತುಚರ್ಯ, ಸದ್ವೃತ್ತ ರೋಗಮುಕ್ತ ಜೀವನಕ್ಕೆ ಅತ್ಯಂತ ಉಪಯುಕ್ತವೆನಿಸಿದೆ ಎಂದರು.

ವೆನ್ಲಾಕ್ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶೋಭಾರಾಣಿ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಪೂರ್ಣಿಮಾ ಸ್ವಾಗತಿಸಿದರು. ಅಂಗನವಾಡಿ ಶಿಕ್ಷಕಿ ಕುಮುದಾಕ್ಷಿ ವಂದಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ಕಿರಿಯ ವೈದ್ಯೆ ಸೌಜನ್ಯ ,ಮಕ್ಕಳ ಪೋಷಕರು ,ಸಾರ್ವಜನಿಕರು ಉಪಸ್ಥಿತರಿದ್ದರು.


Spread the love

Exit mobile version