ಆರೋಪಿ ರೋಶನ್ ಮನೆಯಿಂದ 667 ಗ್ರಾಂ ಚಿನ್ನ, 2.75 ಕೋಟಿ ರೂ. ಮೌಲ್ಯದ ವಜ್ರದ ಉಂಗುರ ವಶಕ್ಕೆ
ಮಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಮಂಗಳೂರು ಪೊಲೀಸರು ಬಂಧಿಸಿರುವ ಆರೋಪಿ ರೋಶನ್ ಸಲ್ಡಾನ (43) ವಿರುದ್ಧ ಚಿತ್ರದುರ್ಗ, ಹಾಗೂ ಮುಂಬೈನಲ್ಲೂ ವಂಚನೆ ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಪ್ರಕರಣದ ಕುರಿತಂತೆ ಪ್ರಕಟನೆ ನೀಡಿರುವ ಅವರು, ಬಜಾಲ್ ಬಲ್ಲಗುಡ್ಡ ನಿವಾಸಿಯಾದ ಆರೋಪಿ ವಿರುದ್ಧ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 22/2025 ಕಲಂ: 316(2), 316(5) 318(2), 318(3) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ ಹಾಗೂ ಅಪರಾಧ ಕ್ರಮಾಂಕ:30/2025 ಕಲಂ:316(2), 316(5), 318(2), 318 (3), 61(2) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆಯಂತೆ ವಂಚನೆ ಪ್ರಕರಣಗಳು ದಾಖಲಾಗಿರುತ್ತದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಆರೋಪಿ ಗುರುವಾರ ಆತನ ಮನೆಯಲ್ಲಿ ಇರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮನೆಯ ಅಡಗುತಾಣದಲ್ಲಿ ಆತನನ್ನು ಪತ್ತೆ ಹಚ್ಚಲಾಗಿದೆ. ಆತ ತನ್ನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 6,72,947 ರೂ. ಮೌಲ್ಯದ ದೇಶಿ ಮತ್ತು ವಿದೇಶಿ ಮದ್ಯ ದೊರೆತಿದ್ದು, ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ. ಆತನ ಮನೆಯಿಂದ ದಾಖಲಾತಿಗಳು, ಖಾಲಿ ಚೆಕ್ಗಳು ಹಾಗೂ ಸುಮಾರು 667 ಗ್ರಾಂ ಚಿನ್ನಭಾರಣ ಮತ್ತು ಅಂದಾಜು 2.75 ಕೋಟಿ ರೂ. ಮೌಲ್ಯದ ವಜ್ರದ ಉಂಗುರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿತನು ಇತರರೊಂದಿಗೆ ಸೇರಿ, ದೇಶದ ವಿವಿಧ ಭಾಗಗಳ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದು, ಕಳೆದ 3 ತಿಂಗಳಲ್ಲಿ ಆರೋಪಿತನ ವ್ಯವಹಾರ ಪರಿಶೀಲಿಸಿದಾಗ ಇತನು ಗೋವಾ, ಬೆಂಗಳೂರು, ಪುಣೆ, ವಿಜಯಪುರ, ತುಮಕೂರು, ಕಲ್ಕತ್ತಾ, ಸಾಂಗ್ಲಿ, ಲಕ್ನೋ ,ಬಾಗಲಕೋಟೆ ಇತ್ಯಾದಿ ಕಡೆಗಳಲ್ಲಿ ಉದ್ದಿಮೆದಾರರಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಸುಮಾರು 32 ಕೋಟಿ ರೂ. ಗಳನ್ನು ಆರೋಪಿ ಮತ್ತು ಇತರರು ಪಡೆದುಕೊಂಡಿರುವುದು ಕಂಡುಬಂದಿರುತ್ತದೆ.
ಆರೋಪಿಯನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಆರೋಪಿಯ ಜತೆಗಿನ ಆತನ ಸಹಚರರ ಪಾತ್ರ ಹಾಗೂ ದೇಶದಲ್ಲಿ ಆತನಿಂದ ಮೋಸಕ್ಕೆ ತುತ್ತಾಗಿರುವ ಸಂತ್ರಸ್ತರು ಹಾಗೂ ಮೌಲ್ಯದ ಬಗ್ಗೆ ವಿಸ್ತೃತ ತನಿಖೆಯಿಂದ ತಿಳಿದು ಬರಲಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.