ಇಂದಿನಿಂದ ರೈಲ್ವೆ ಟಿಕೆಟ್ ದರದಲ್ಲಿ ಹೆಚ್ಚಳ
ಹಲವು ವರ್ಷಗಳ ಬಳಿಕ ರೈಲ್ವೆ ಇಲಾಖೆ ರೈಲಿನ ಟಿಕೆಟ್ ದರದಲ್ಲಿ ಹೆಚ್ಚಳ ಮಾಡಿದ್ದು, ಇಂದಿನಿಂದಲೇ ಅನ್ವಯವಾಗುವಂತೆ ಮೇಲ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳ ಹವಾನಿಯಂತ್ರಿತ (ಎಸಿ) ದರ್ಜೆಯ ಪ್ರಯಾಣದರವನ್ನು ಪ್ರತಿ ಕಿ.ಮೀಗೆ 2 ಪೈಸೆ, ಹವಾನಿಯಂತ್ರಣ ರಹಿತ (ನಾನ್ ಎ.ಸಿ) ದರ್ಜೆಯ ದರವನ್ನು 1 ಪೈಸೆ ಏರಿಕೆ ಮಾಡಿ ರೈಲ್ವೆ ಇಲಾಖೆಯು ಸೋಮವಾರ ಆದೇಶ ಹೊರಡಿಸಿದೆ.
500 ಕಿ.ಮೀವರೆಗಿನ ಸಾಮಾನ್ಯ ದ್ವಿತೀಯ ದರ್ಜೆಯ ಪ್ರಯಾಣ ದರದಲ್ಲಿಯೂ ಹಿಂದಿನ ದರವನ್ನು ಉಳಿಸಿಕೊಳ್ಳಲಾಗಿದೆ. ನಂತರದ ಪ್ರತಿ ಕಿ.ಮೀಗೆ ಅರ್ಧ ಪೈಸೆ ಏರಿಕೆ ಮಾಡಲಾಗಿದೆ. ಸಾಮಾನ್ಯ ಸ್ವೀಪರ್ ವರ್ಗ, ಪ್ರಥಮ ದರ್ಜೆಯ ಪ್ರಯಾಣದರವನ್ನು ಪ್ರತಿ ಕಿ.ಮೀಗೆ ಅರ್ಧ ಪೈಸೆ ಏರಿಕೆ ಮಾಡಲಾಗಿದೆ.
‘ಪರಿಷ್ಕೃತ ದರವು ಪ್ರೀಮಿಯರ್ ಹಾಗೂ ವಿಶೇಷ ರೈಲುಗಳಿಗೆ ಅನ್ವಯವಾಗಲಿದೆ. ಅದರಂತೆ, ರಾಜಧಾನಿ, ಶತಾಬಿ, ತುರಂತೊ, ವಂದೇ ಭಾರತ್, ತೇಜಸ್, ಹಮ್‌ಸಫರ್, ಅಮೃತ್ ಭಾರತ್, ಮಹಮಾನಾ, ಗತಿಮಾನ್, ಅಂತ್ಯೋದಯ, ಜನಶತಾಬಿ, ಯುವ ಎಕ್ಸ್‌ಪ್ರೆಸ್, ಎ.ಸಿ. ವಿಸ್ಟಾಡೋಮ್ ಕೋಚ್, ಅನುಭೂತಿ ಕೋಚ್, ಸಬರ್ಬನ್ ಹೊರತುಪಡಿಸಿದ ಸಾಮಾನ್ಯ ರೈಲುಗಳಿಗೂ ಪರಿಷ್ಕೃತ ದರವು ಅನ್ವಯವಾಗಲಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಜುಲೈ1ರಿಂದ ಬುಕ್ಕಿಂಗ್ ಮಾಡಿದ ಎಲ್ಲ ಟಿಕೆಟ್‌ಗಳಿಗೂ ಪರಿಷ್ಕೃತ ದರ ಅನ್ವಯವಾಗಲಿದೆ. ಈ ಹಿಂದೆ ಬುಕ್ಕಿಂಗ್ ಮಾಡಿದ ಟಿಕೆಟ್‌ಗಳು ಹಿಂದಿನ ದರವೇ ಮಾನ್ಯವಾಗಿರಲಿದೆ. ಪಿಆರ್‌ಎಸ್, ಯುಟಿಎಸ್ ಹಾಗೂ ಕೌಂಟರ್‌ಗಳ ವ್ಯವಸ್ಥೆಯನ್ನು ಪರಿಷ್ಕರಿಸಲಾಗಿದೆ’ ಎಂದು ತಿಳಿಸಿದೆ.