ಇನ್ಸ್ಟಾಗ್ರಾಂ ಪೇಜ್ನಲ್ಲಿ ಪ್ರಚೋದನಕಾರಿ ಸಂದೇಶ ಹರಡಿದ ಯುವಕ ಬಂಧನ
ಮಂಗಳೂರು: “Karavali_tigers” ಎಂಬ ಇನ್ಸ್ಟಾಗ್ರಾಂ ಪೇಜ್ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹರಡುತ್ತಿದ್ದ ಆರೋಪಿತನನ್ನು ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಕೈಫ್ (22 ಕಿಲ್ಲೂರು ಮನೆ, ಮಾಲವಂತಿಗೆ, ದಕ್ಷಿಣ ಕನ್ನಡ ಬಂಧಿತ ಆರೋಪಿ.
2025ರ ಜುಲೈ 19ರಂದು ಮಂಗಳೂರು ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ.41/2025) ದಾಖಲಿಸಲಾಗಿತ್ತು. ಆರೋಪಿಯ ವಿರುದ್ಧ ಐಟಿ ಕಾಯ್ದೆಯ ಕಲಂ 66(ಸಿ) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 56, 353(1), 192 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯು ತಮಿಳುನಾಡಿನಲ್ಲಿ ಅಡಗಿ ಕುಳಿತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ, ಮಂಗಳೂರು ಪೊಲೀಸರು ತಮಿಳುನಾಡಿಗೆ ತೆರಳಿ ಅವನನ್ನು ವಶಕ್ಕೆ ಪಡೆದು ಮಂಗಳೂರಿಗೆ ತರಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
“Karavali_tigers” ಪೇಜ್ ವಿರುದ್ಧ ಮಂಗಳೂರು ನಗರದ ಬಜ್ಪೆ ಪೊಲೀಸ್ ಠಾಣೆಯಲ್ಲಿಯೂ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.