ಇವಾ ಫಾತಿಮಾಳಿಗೆ ಅಂತಾರಾಷ್ಟ್ರೀಯ ಸ್ಟಾರ್ ಕಿಡ್ಸ್ ಪ್ರಶಸ್ತಿ
ಸುಳ್ಯ/ಶಾರ್ಜಾ: ಇಂಟರ್ನ್ಯಾಷನಲ್ ಸ್ಟಾರ್ ಕಿಡ್ಸ್ ಅವಾರ್ಡ್ಸ್ ನಿಂದ ಸಾಧಕ ಮಕ್ಕಳಿಗಾಗಿ ನೀಡುವ ಪ್ರತಿಷ್ಠಿತ ‘ಸ್ಟಾರ್ ಅಚೀವರ್’ ಪ್ರಶಸ್ತಿಯನ್ನು ಅರಂಬೂರಿನ ಇವಾ ಫಾತಿಮಾ ಬಶೀರ್ ಪಡೆದಿದ್ದಾಳೆ. ಶೈಕ್ಷಣಿಕ, ಸಾಹಿತ್ಯ, ನಾವೀನ್ಯತೆ, ಕಲೆ ಮತ್ತು ಸಮುದಾಯ ಸೇವೆಯಲ್ಲಿ ಅವರ ಅಸಾಧಾರಣ ಬಹುಮುಖ ಪ್ರತಿಭೆ ಮತ್ತು ಕೊಡುಗೆಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಇವಾ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಸತತವಾಗಿ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತಿದ್ದಾರೆ. ಅವರು ತಮ್ಮ ಶಾಲೆಯಿಂದ ‘ಕ್ಲಾಸ್ ಟಾಪರ್’, ‘ಗೋಲ್ಡನ್ ರಿಬ್ಬನ್’ ಮತ್ತು ‘ಅಕಾಡೆಮಿಕ್ ಲಾರೆಟ್’ ನಂತಹ ಶೈಕ್ಷಣಿಕ ಗೌರವಕ್ಕೆ ಪಾತ್ರರಾಗಿದ್ದಾಳೆ. ಅಲ್ಲದೆ, ಪ್ರತಿಷ್ಠಿತ ಸಂಸ್ಥೆಗಳು ನಡೆಸುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಒಲಿಂಪಿಯಾಡ್‌ಗಳಲ್ಲಿನ ಅತ್ಯುತ್ತಮ ಸಾಧನೆಗಾಗಿ ಹಲವಾರು ವಿದ್ಯಾರ್ಥಿವೇತನಗಳು, ಟ್ರೋಫಿಗಳು, ಪದಕಗಳು ಮತ್ತು ಸಾಧನಾ ಪ್ರಮಾಣಪತ್ರಗಳನ್ನು ಪಡೆದುಕೊಂಡಿದ್ದಾಳೆ..
ಶಿಕ್ಷಣದ ಹೊರತಾಗಿ, ಇವಾ ಸಾಹಿತ್ಯ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು ಈಗಾಗಲೇ ಒಂದು ಕಥಾ ಪುಸ್ತಕವನ್ನು ಪ್ರಕಟಿಸಿದ್ದು, ಮೂರು ಪುಸ್ತಕಗಳಿಗೆ ಸಹ-ಲೇಖಕಿಯಾಗಿದ್ದಾಳೆ. ಸುದೀರ್ಘ ಸಮಯಾವಧಿ ಸತತವಾಗಿ ಇಂಗ್ಲಿಷ್ ಕಥಾ ಪುಸ್ತಕಗಳನ್ನು ಓದುವ ದಾಖಲೆ ನಿರ್ಮಿಸಿ ಅದಕ್ಕಾಗಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಮತ್ತು ‘ಅರೇಬಿಯನ್ ವರ್ಲ್ಡ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಗಿಟ್ಟಿಸಿ ಮಾನ್ಯತೆಯನ್ನು ಪಡೆದಿದ್ದಾಳೆ. ಶಾರ್ಜಾ ಸರ್ಕಾರದ ಶಿಕ್ಷಣ ಇಲಾಖೆಯಿಂದ “ಪಯೋನೀರ್ ರೀಡರ್” ಪುರಸ್ಕಾರಕ್ಕೆ ಪಾತ್ರರಾಗಿದ್ದಾಳೆ.
ಯುವ ಸಂಶೋಧಕಿಯಾಗಿರುವ ಇವಾ, ವಿದ್ಯಾರ್ಥಿಗಳ ಕಲಿಕೆಯ ಅನುಭವವನ್ನು ಹೆಚ್ಚಿಸಲು ಸಹಾಯ ಮಾಡುವ ಹಲವಾರು ಎಐ (AI) ಆಧಾರಿತ ಶೈಕ್ಷಣಿಕ ಅಪ್ಲಿಕೇಶನ್‌ಗಳು ಮತ್ತು ವೀಡಿಯೊಗಳನ್ನು ಅಭಿವೃದ್ಧಿಪಡಿಸಿ ಪ್ರಕಟಿಸಿದ್ದಾಳೆ. ಅವರು ಸಮಾಜಸೇವೆಯಲ್ಲಿಯೂ ಆಸಕ್ತಿ ಹೊಂದಿದ್ದು ಸಾಮಾಜಿಕ ಕಾರ್ಯಗಳಲ್ಲಿ ಸ್ವಯಂಸೇವಕಿಯಾಗಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾಳೆ. ಇದರೊಂದಿಗೆ ವಿವಿಧ ಸ್ಪರ್ಧೆಗಳು ಮತ್ತು ಸೃಜನಶೀಲ ಚಟುವಟಿಕೆಗಳ ಮೂಲಕ ಕಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾಳೆ.
ಇವಾ ಫಾತಿಮಾ ಅವರು ಮೂಲತಃ ಸುಳ್ಯದ ಅಲೆಟ್ಟಿ ಗ್ರಾಮದ ಮಹಮ್ಮದ್ ಬಶೀರ್ ಅರಂಬೂರು ಮತ್ತು ಹಸೀನಾ ದಂಪತಿಯ ಪುತ್ರಿ. ಯುಎಇಯ ಶಾರ್ಜಾದ ಜೆಮ್ಸ್ ಮಿಲೇನಿಯಮ್ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ, ಪ್ರಸ್ತುತ ಶಾರ್ಜಾದಲ್ಲಿ ನೆಲೆಸಿದ್ದಾರೆ.
