Home Mangalorean News Kannada News ಇಸ್ರೇಲ್ ಮತ್ತು ಇರಾನ್ ಯುದ್ಧದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧ – ಡಾ. ಆರತಿ ಕೃಷ್ಣ

ಇಸ್ರೇಲ್ ಮತ್ತು ಇರಾನ್ ಯುದ್ಧದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧ – ಡಾ. ಆರತಿ ಕೃಷ್ಣ

Spread the love

ಇಸ್ರೇಲ್ ಮತ್ತು ಇರಾನ್ ಯುದ್ಧದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧ – ಡಾ. ಆರತಿ ಕೃಷ್ಣ

ಇಸ್ರೇಲ್ ಮತ್ತು ಇರಾನ್ ನಡುವೆ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿಯು ಆ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಆತಂಕ ಉಂಟು ಮಾಡಿದೆ.ಲಭ್ಯವಿರುವ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಪೈಕಿ ಬೆಂಗಳೂರು ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ಆಲಿಪುರ ಗ್ರಾಮದ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಇತರರು ಇರಾನ್ ದೇಶದ ರಾಜದಾನಿಯಾದ ತೆಹರಾನ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಶಿಕ್ಷಣಾ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ, ಧಾರ್ಮಿಕ ಅಧ್ಯಯನ, ಉದ್ಯೋಗ ಹಾಗೂಪವಾಸಕ್ಕಾಗಿ ತೆರಳಿರುತ್ತಾರೆ. ಇದಲ್ಲದೇ ಅನೇಕ ಜನರು ಇರಾನ್ ದೇಶದ ಪ್ರವಾಸಕ್ಕಾಗಿ ತೆರಳಿರುವ ಮಾಹಿತಿ ಲಭ್ಯವಾಗಿದೆ.ಸದರಿ ಅನಿವಾಸಿ ಭಾರತೀಯರ ಪೋಷಕರು ಕೂಡ ಆತಂಕಗೊಂಡಿದ್ದು ಈ ಕಛೇರಿಗೆ ದೂರವಾಣಿ ಮುಖೇನ ಅವರ ಮಕ್ಕಳ ಹಾಗೂ ಸಂಬಂಧಿಕರ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ.

ಈಗಾಗಲೇ, ಅನಿವಾಸಿ ಭಾರತೀಯ ಸಮಿತಿ, ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ರವರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಇರಾನ್ ದೇಶದಲ್ಲಿರುವ ಭಾರತೀಯ ರಾಯಭಾರ ಕಛೇರಿಗೆ ಪತ್ರ ಬರೆದು ಇರಾನ್‌ನಲ್ಲಿ ನೆಲೆಸಿರುವ ಈ ಮೇಲ್ಕಂಡ ವಿದ್ಯಾರ್ಥಿಗಳನ್ನು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಹಾಗೂ ಭಾರತ ದೇಶಕ್ಕೆ ವಾಪಸ್ ಕರೆತರಲು ಕ್ರಮಗಳನ್ನು ಕೈಗೊಳ್ಳುವಂತೆ ಕೋರಿರುತ್ತಾರೆ. ಮುಂದುವರೆದು, ವಿದೇಶಾಂಗ ವ್ಯವಹಾರ ಸಚಿವಾಲಯವು ಇರಾನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಸಂಬಂಧಿಸಿದ ಮಾಹಿತಿಯನ್ನು ಎಲ್ಲಾ ಮೂಲಗಳಿಂದ ಸಂಗ್ರಹಿಸುತ್ತಿದ್ದು, ಪ್ರಸ್ತುತ 5,000ಕ್ಕೂ ಹೆಚ್ಚು ಅನಿವಾಸಿ ಭಾರತೀಯರನ್ನು ಸಮೀಪದಲ್ಲಿರುವ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಯುದ್ಧ ಪರಿಸ್ಥಿತಿಯು ಇನ್ನೂ ಹೆಚ್ಚು ತೀಕ್ಷಣಗೊಂಡಲ್ಲಿ, ಈ ಜನರನ್ನು ಸಮೀಪದ ರಾಷ್ಟ್ರಗಳ ಗಡಿ ಮೂಲಕ ಸ್ಥಳಾಂತರಿಸಿ ಆಯಾ ದೇಶಗಳಿಂದ ಭಾರತಕ್ಕೆ ವಾಪಸ್ಸು ಕರೆ ತರುವ ಯೋಜನೆಯನ್ನು ಜಾರಿಗೊಳಿಸಲಿದೆ.

ಮುಂದುವರೆದು, ಇಸ್ರೇಲ್ ದೇಶದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಅನಿವಾಸಿ ಭಾರತೀಯರ ಮಾಹಿತಿಯನ್ನು ಕೂಡ ಕಲೆಹಾಕುತ್ತಿದ್ದು ಅವರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಹಾಗೂ ವಾಪಸ್ ಕರೆತರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಇಸ್ರೇಲ್ ದೇಶದಲ್ಲಿರುವ ಭಾರತೀಯ ರಾಯಭಾರ ಕಛೇರಿಗೆ ಪತ್ರ ಬರೆಯಲಾಗಿದೆ.

ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯು ಇರಾನ್ ಹಾಗೂ ಇಸ್ರೇಲ್ ದೇಶಗಳಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಅನಿವಾಸಿ ಭಾರತೀಯರನ್ನು ಸುರಕ್ಷಿತವಾಗಿರಿಸಲು ಹಾಗೂ ವಾಪಸ್ ಕರೆತರುವ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಸಂಬಂಧಪಟ್ಟ ದೇಶಗಳ ಭಾರತೀಯ ರಾಯಭಾರ ಕಛೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಶ್ರಮಿಸುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version