ಇ- ಆಟೋರಿಕ್ಷಾ ಪರವಾನಿಗೆ ಪಡೆಯಲು ಆರ್.ಟಿ.ಒ ಸೂಚನೆ
ಮಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದ ಆದೇಶದಂತೆ ಮಂಗಳೂರು ನಗರದಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಿಸುವ ಬಗ್ಗೆ ನಿಬಂಧನೆಗಳನ್ನು ವಿಧಿಸಿ, ಪರವಾನಿಗೆಯನ್ನು ವಿತರಿಸಲು ಜಿಲ್ಲಾಧಿಕಾರಿಗಳು ನಿರ್ಣಯಿಸಿರುತ್ತಾರೆ.
2022 ರ ಜನವರಿ 20 ರಿಂದ 2025 ರ ಅಕ್ಟೋಬರ್ 30 ರವರೆಗೆ ಬ್ಯಾಟರಿ ಚಾಲಿತ ಇಂಧನ ಬಳಸಿ ರಹದಾರಿ ಪಡೆಯದೇ ನೊಂದಣಿಯಾಗಿರುವ ಹಾಗೂ ವಲಯ-1 ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಆಟೋರಿಕ್ಷಾಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಪ್ರಾಧಿಕಾರದ ನಿಬಂಧನೆಗಳಿಗೆ ಒಳಪಟ್ಟು ಪರವಾನಿಗೆಯನ್ನು ಪಡೆದುಕೊಳ್ಳಬೇಕು. ಹಾಗೂ ವಲಯ 1 ರ ವ್ಯಾಪ್ತಿಗೆ ಬರುವ ಪರವಾನಿಗೆದಾರರು ಇ-ಆಟೋರಿಕ್ಷಾಗಳಿಗೆ ಆಕಾಶ ನೀಲಿ ಬಣ್ಣದ ಚೌಕಾರಾರದಲ್ಲಿ ಬಣ್ಣವನ್ನು ಬಳಿದು, ಪೊಲೀಸ್ ಇಲಾಖೆಯಿಂದ ಗುರುತಿನ ಸಂಖ್ಯೆ ಪಡೆಯಬೇಕು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಕನಿಷ್ಠ 5 ವರ್ಷ ನಿವಾಸಿಯಾಗಿರುವ ಬಗ್ಗೆ ವಾಸ ಸ್ಥಳದ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು. ಈಗಾಗಲೇ ಮಂಗಳೂರು ನಗರ ವ್ಯಾಪ್ತಿಯಲ್ಲಿ ಆಟೋರಿಕ್ಷಾ ಪರವಾನಿಗೆ ಹೊಂದಿರುವವರಿಗೆ ಇ-ಆಟೋರಿಕ್ಷಾ ಪರವಾನಿಗೆಯನ್ನು ಮಂಜೂರು ಮಾಡಲಾಗುವುದಿಲ್ಲ. ಒಬ್ಬರಿಗೆ ಒಂದೇ ಇ-ಆಟೋರಿಕ್ಷಾ ಪರವಾನಿಗೆಯನ್ನು ಮಂಜೂರು ಮಾಡಲಾಗುತ್ತದೆ. ಇ-ಆಟೋರಿಕ್ಷಾ ಪರವಾನಿಗೆಯನ್ನು ಪಡೆದುಕೊಂಡವರು ಕಡ್ಡಾಯವಾಗಿ ಆಟೋರಿಕ್ಷಾ ಚಾಲನೆ ಮಾಡುವ ಚಾಲನಾ ಪರವಾನಿಗೆ/ ಬ್ಯಾಡ್ಜ್ ಹೊಂದಿರಬೇಕು ಹಾಗೂ ಕಡ್ಡಾಯವಾಗಿ ಪರವಾನಿಗೆದಾರನೆ ಆಟೋರಿಕ್ಷಾವನ್ನು ಚಾಲನೆ ಮಾಡಬೇಕು. ಕಾನೂನಾತ್ಮಕ ಹಾಗೂ ಆಡಳಿತದ ಹಿತದೃಷ್ಟಿಯಿಂದ ಪ್ರಾಧಿಕಾರಕ್ಕೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ತಕ್ಷಣ ಪರವಾನಿಗೆಯನ್ನು ಪಡೆದುಕೊಳ್ಳುವಂತೆ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಆರ್.ಟಿ.ಒ ಕಚೇರಿ ಪ್ರಕಟಣೆ ತಿಳಿಸಿದೆ.
