ಉಗ್ರನ ಹಿಟ್​ಲಿಸ್ಟ್​ ನಲ್ಲಿ ಉಡುಪಿ ಕೃಷ್ಣ ಮಠ! ಮಠದ ಆಸುಪಾಸಿನಲ್ಲೂ ತಿರುಗಾಡಿದ್ದ ಮೊಹಮ್ಮದ್ ಶಾರೀಕ್

Spread the love

ಉಗ್ರನ ಹಿಟ್​ಲಿಸ್ಟ್​ ನಲ್ಲಿ ಉಡುಪಿ ಕೃಷ್ಣ ಮಠ! ಮಠದ ಆಸುಪಾಸಿನಲ್ಲೂ ತಿರುಗಾಡಿದ್ದ ಮೊಹಮ್ಮದ್ ಶಾರೀಕ್

ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಶನಿವಾರ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಉಗ್ರ ಮೊಹಮ್ಮದ್ ಶಾರೀಕ್ ಕೃಷ್ಣ ಮಠ ಹಾಗೂ ರಥಬೀದಿ ಪರಿಸರಕ್ಕೆ ಬಂದಿರುವ ಮಾಹಿತಿ ಲಭಿಸಿದ್ದು, ಕೃಷ್ಣ ಮಠ ಹಿಟ್ ಲಿಸ್ಟ್ನಲ್ಲಿತ್ತೇ ಎಂಬ ಅನುಮಾನ ತನಿಖಾಧಿಕಾರಿಗಳಲ್ಲಿ ಮೂಡಿದೆ.

ಶಾರೀಕ್ ತಿರುಗಾಡಿದ ಮೊಬೈಲ್ ಲೋಕೇಶನ್ ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಅ.11ರಂದು ರಥಬೀದಿಯಿಂದ ಆತ ಕರೆ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಮಂಗಳೂರು ಪೊಲೀಸರು ಶನಿವಾರ ರಥಬೀದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕೃಷ್ಣ ಮಠದೊಳಕ್ಕೂ ಶಾರೀಕ್ ಪ್ರವೇಶಿಸಿರುವ ಅನುಮಾನವಿದೆ. ತಿಂಗಳ ಹಿಂದಿನ ಘಟನೆಯಾದ್ದರಿಂದ, ಪೊಲೀಸರಿಗೆ ಹಳೆಯ ಸಿಸಿ ಕ್ಯಾಮರಾ ಫೂಟೇಜ್ ಸಿಕ್ಕಿಲ್ಲ. ಹೀಗಾಗಿ ರಥಬೀದಿ ಸುತ್ತಮುತ್ತಲಿನ ಹೊಟೇಲ್, ಲಾಡ್ಜ್, ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಫೂಟೇಜ್ಗಳನ್ನು ಕಲೆ ಹಾಕಿದ್ದಾರೆ.

ರಥಬೀದಿ ಪರಿಸರದಲ್ಲಿ ಪ್ರತಿದಿನ ಚೀಲ ಹಿಡಿದುಕೊಂಡು ತಿರುಗಾಡುವ ಅರೆ ಮಾನಸಿಕ ಅಸ್ವಸ್ಥೆಯೊಬ್ಬಳು ಒತ್ತಾಯಪೂರ್ವಕವಾಗಿ ಶಾರೀಕ್ನಿಂದ ಮೊಬೈಲ್ ಪಡೆದು ಕರೆ ಮಾಡಿ ನಂತರ ವಾಪಸ್ ನೀಡಿದ್ದಾಳೆ. ಶಾರೀಕ್ ಮೊಬೈಲ್ ಬಳಕೆ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಈ ಮಾಹಿತಿ ಲಭಿಸಿದೆ. ಹೀಗಾಗಿ ತನಿಖೆಯನ್ನು ಉಡುಪಿಗೂ ವಿಸ್ತರಿಸಿದ್ದಾರೆ.

ಉಡುಪಿಯಲ್ಲೂ ಸ್ಯಾಟ್ ಲೈಟ್ ಫೋನ್ ಸಕ್ರಿಯ ?!

ಉಡುಪಿ ಜಿಲ್ಲೆಯಲ್ಲಿ ಸ್ಯಾಟಲೈಟ್ ಫೋನ್ ಕರೆ ಬಂದಿರುವ ಬಗ್ಗೆ ರಾಜ್ಯ ಆಂತರಿಕ ಭದ್ರತಾ ವಿಭಾಗ, ಉಡುಪಿ ಜಿಲ್ಲಾ ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ನೀಡಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಉಡುಪಿ ಜಿಲ್ಲೆಯ ಮಂದಾರ್ತಿ ದೇವಸ್ಥಾನದಿಂದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ಗೋಡಂಬಿ ಫ್ಯಾಕ್ಟರಿಯ ಬಳಿ ತುರಾಯ ಸ್ಯಾಟಲೈಟ್ ಫೋನ್ ಕರೆಯೂ ಆಪರೇಟ್ ಆಗಿರುವ ಬಗ್ಗೆ ನ.9ರಂದು ಮಾಹಿತಿ ಲಭಿಸಿತ್ತು ಎಂದು ಹೇಳಲಾಗಿದೆ. ಇನ್ನು, ಸ್ಪೋಟಕ್ಕೂ ಮುನ್ನಾ ದಿನ ದ.ಕ.ಜಿಲ್ಲೆಯ ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ ಹಿನ್ನೆಲೆಯಲ್ಲಿ ಸತತ 2 ದಿನಗಳಿಂದ ಸ್ಥಳ ಪರಿಶೀಲನೆ ಹಾಗೂ ಹೆಚ್ಚಿನ ತನಿಖೆ ನಡೆದಿದೆ.


Spread the love