Home Mangalorean News Kannada News ಉಡುಪಿ: ಐಸಿವೈಎಮ್ ಕುಂತಳನಗರದಿಂದ “ಯೆಯಾ ಗಾದ್ಯಾಂತ್ ನೇಜ್ ಲಾವ್ಯಾಂ” ವಿನೂತನ ಕಾರ್ಯಕ್ರಮ

ಉಡುಪಿ: ಐಸಿವೈಎಮ್ ಕುಂತಳನಗರದಿಂದ “ಯೆಯಾ ಗಾದ್ಯಾಂತ್ ನೇಜ್ ಲಾವ್ಯಾಂ” ವಿನೂತನ ಕಾರ್ಯಕ್ರಮ

Spread the love

ಉಡುಪಿ: ಸದಾ ವಾಟ್ಸಪ್, ಫೇಸ್‍ಬುಕ್, ಮೊಬೈಲ್ ಗುಂಗಿನಲ್ಲೇ ಕಾಲ ಕಳೆಯುವ ಇಂದಿನ ಯುವ ಜನಾಂಗಕ್ಕೆ ಮಾದರಿ ಎಂಬಂತೆ ಪಾಳು ಬಿದ್ದ ಗದ್ದೆಯನ್ನು ನಾಟಿ ಮಾಡುವ ಮೂಲಕ ಯುವಜನರಿಗೆ ಕೃಷಿಯತ್ತ ಆಕರ್ಷಿಸುವ ಕೆಲಸ ಭಾರತೀಯ ಕೆಥೊಲಿಕ್ ಯುವ ಸಂಚಾಲನ ಸಂತ ಅಂತೋನಿಯವರ ಇಗರ್ಜಿ ಕುಂತಳ ನಗರ ಇದರ ಕ್ರೈಸ್ತ ಯುವಜನರು ಸೇರಿ ಮಾಡಿದ್ದಾರೆ.

ಕೈಸ್ತ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರು ಇತ್ತೀಚೆಗೆ ಕ್ರೈಸ್ತ ಸಮುದಾಯಕ್ಕೆ ನೀಡಿದ   ‘ಲಾವ್ದಾತೊಸಿ’ ಎಂಬ ಆದೇಶದಲ್ಲಿ ಪರಿಸರವನ್ನು ಉಳಿಸಿ ಬೆಳೆಸಲು ಕರೆ ನೀಡಿದ್ದು ಅದರಂತೆ ಯುವಜನರಿಗೆ ಕೃಷಿಯಲ್ಲಿ ಹೆಚ್ಚು ಆಸಕ್ತಿ ಬರುವಂತೆ ಮಾಡುವ ಉದೇಶದಿಂದ ಚರ್ಚಿನ ಧರ್ಮಗುರು ಹಾಗೂ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ ಡೆನಿಸ್ ಡೆಸಾ ಹಾಗೂ ಐಸಿವೈಎಮ್ ಸಂಘಟನೆಯ ಸದಸ್ಯರು ಸೇರಿ ಪಾಳು ಬಿದ್ದ ಗದ್ದೆಯಲ್ಲಿ ಒಂದು ದಿನವಿಡಿ ಆಟ ಆಡುವುದರೊಂದಿಗೆ ಬಳಿಕ ಆ ಗದ್ದೆಯನ್ನು ಕೇವಲ ಆಟಕ್ಕಾಗಿ ಬಳಸದೆ ಅದರಲ್ಲಿ ಭತ್ತ ನಾಟಿ ಮಾಡಿ ಫಸಲು ಪಡೆಯಬೇಕು ಎಂಬ ನಿರ್ಧಾರಕ್ಕೆ ಬಂದರು. ಸಪ್ಟೆಂಬರ್ 6 ರಂದು ಇಡೀ ಉಡುಪಿ ಧರ್ಮಪ್ರಾಂತ್ಯದ ಸುಮಾರು 1000 ಕ್ರೈಸ್ತ ಯುವಜನರನ್ನು ಸೇರಿಸಿ “ಯೆಯಾ ಗಾದ್ಯಾಂತ್ ಖೆಳ್ಯಾಂ”(ಬನ್ನಿ ಗದ್ದೆಯಲ್ಲಿ ಆಡೋಣ) ಎಂಬ ಹೆಸರಿನಲ್ಲಿ ವಿವಿಧ ಸ್ಪರ್ಧೆಗಳನ್ನು ಕೆಸರುಗದ್ದೆಯಲ್ಲಿ ಆಯೋಜಿಸಿದ್ದರು. ಇಂತಹ ಒಂದು ಕಾರ್ಯ ಯುವಜನರಿಂದ ನಡೆಯುತ್ತಿರುವುದು ಉಡುಪಿ ಧರ್ಮಪ್ರಾಂತ್ಯದಲ್ಲಿ ಪ್ರಥಮವಾಗಿದೆ.

ICYM Kuntalnagar_paddiplant 25-09-2015 10-28-54

ಬಳಿಕ ರಜಾದಿನವಾದ ಶುಕ್ರವಾರ ಕುಂತಳನಗರ ವ್ಯಾಪ್ತಿಯ ಯುವಜನರು ಹಾಗೂ ಚರ್ಚಿನ ಪಾಲನಾ ಮಂಡಳಿಯ ಸದಸ್ಯರು ಆಟಕ್ಕಾಗಿ ಉಪಯೋಗಿಸಿದ ಗದ್ದೆಯಲ್ಲಿ “ಯೆಯಾ ಗಾದ್ಯಾಂತ್ ನೇಜ್ ಲಾವ್ಯಾಂ”(ಬನ್ನಿ ಗದ್ದೆಯಲ್ಲಿ ನೇಜಿ ನೆಡೋಣ) ಎಂಬ ಹೆಸರಿನಲ್ಲಿ ಪಾಳು ಬಿದ್ದ ಮೂರು ಗದ್ದೆಗಳನ್ನು ಸ್ವತಃ ಯುವಜನರು ಗದ್ದೆಗಿಳಿದು ನಾಟಿ ಮಾಡಿದರು. ಯುವಜನರ ಉತ್ಸಾಹವನ್ನು ಕಂಡ ಚರ್ಚಿನ ಧರ್ಮಗುರು ವಂ ಡೆನಿಸ್ ಡೆಸಾ ಮತ್ತು ಉಡುಪಿ ವಲಯದ ಯುವನಿರ್ದೆಶಕರಾದ ವಂ ರೋಯ್ಸನ್ ಫೆರ್ನಾಂಡಿಸ್ ಕೂಡ ಗದ್ದೆಗಿಳಿದು ಮೂರು ಗದ್ದೆಗಳನ್ನು ನಾಟಿ ಮಾಡುವ ತನಕ ಜೊತೆ ಸೇರಿದರು.

ಯುವಜನರ ಕೆಲಸಕ್ಕೆ ಬೆಂಬಲವಾಗಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ವಲೇರಿಯನ್ ಮಥಾಯಸ್ ಹಾಗೂ ಇತರ ಸದಸ್ಯರು ಕೂಡ ಸಾಥ್ ನೀಡಿದರು. ಮಧ್ಯಾಹ್ನ ಭಾಗವಹಿಸಿದ ಎಲ್ಲಾ ಯುವಜನರಿಗೆ ಹಾಗೂ ಇತರರಿಗೆ ಸ್ಥಳೀಯ ಮಹಿಳೆಯರು ಗಂಜಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಗದ್ದೆಯ ಮಾಲಕಿ ಹಿರಿಯರಾದ ಶ್ಯಾಮಲ ಶೆಟ್ಟಿ ಸ್ಥಳದಲ್ಲಿ ಉಪಸ್ಥಿತರಿದ್ದು ಯುವಜನರಿಗೆ ಪ್ರೋತ್ಸಾಹ ಕೂಡ ನೀಡಿದರು.

ಕಾರ್ಯಕ್ರಮದ ಕುರಿತು  ಕುಂತಳನಗರ ಇಗರ್ಜಿ  ಧರ್ಮಗುರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಉಡುಪಿ ಧರ್ಮಪ್ರಾಂತ್ಯ ವಂ. ಡೆನಿಸ್ ಡೆಸಾ, ಮಾತನಾಡಿ ಕಳೆದ ಸಪ್ಟೆಂಬರ್ 6ರಂದು ಇದೇ ಗದ್ದೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ 1000 ಕ್ಕೂ ಅಧಿಕ ಯುವಜನರು ಜೊತೆಯಾಗಿ ಸೇರಿ ಕೆಸರುಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಈ ಗದ್ದೆಯನ್ನು ಮತ್ತೆ ಪುನಃ ನಾಟಿ ಮಾಡಿ ಫಲವತ್ತಾದ ಫಸಲು ಪಡೆಯುವುದರೊಂದಿಗೆ ,ಯುವಜನರು ಕೇವಲ ಆಟಕ್ಕೆ ಸೀಮಿತವಾಗದೆ ಕೃಷಿಯತ್ತ ಹೆಚ್ಚು ಆಕರ್ಷಿತರಾಗಬೇಕು ಎನ್ನುವುದು ಇದರ ಮುಖ್ಯ ಉದ್ದೇಶ. ನಮ್ಮ ಪೂರ್ವಜರಿಂದ ಇಳಿದು ಬಂದ ಕೃಷಿಯ ಕೆಲಸ ಇಂದು ಯುವಜನರಿಗೆ ತಿಳಿಯಬೇಕು. ಕೃಷಿಗಾಗಿ ನಮ್ಮ ದೇಶದ ರೈತರು ಎಷ್ಟೊಂದು ಬೆವರು ಸುರಿಸಿ ದುಡಿದು ದೇಶದ ಹಸಿವನ್ನು ನೀಗಿಸುತ್ತಿದ್ದಾರೆ ಇದು ಇಂದಿನ ಯುವಜನರಿಗೆ ಅರ್ಥವಾಗಬೇಕು. ಅಲ್ಲದೆ ಇತ್ತೀಚೆಗೆ ನಮ್ಮ ಜಗದ್ಗುರು ಪೋಪ್ ಫ್ರಾನ್ಸಿಸ್ ಪರಿಸರಕ್ಕೆ ಸಂಬಂಧಿಸಿ ಲಾವ್ದಾತೊಸಿ ಎಂಬ ಆದೇಶವನ್ನು ನೀಡಿದ್ದು ಅದರಲ್ಲಿ ನಮ್ಮ ಪರಿಸರವನ್ನು ಕೇವಲ ಇಂದು ಉಪಯೋಗಿಸಿ ನಾಶ ಮಾಡುವುದನ್ನು ಬಿಟ್ಟು ಮುಂದಿನ ಪೀಳಿಗೆಗೆ ಕೂಡ ಕಾಪಾಡಿಕೊಂಡು ಬರಬೇಕು ಎನ್ನುವುದನ್ನು ಅವರು ಹೇಳಿದ್ದಾರೆ. ಮುಖ್ಯವಾಗಿ ನೀರಿನ ಬಳಕೆ ಮತ್ತು ಉಳಿಕೆ, ಅರಣ್ಯ ನಾಶ, ಕೃಷಿಯ ಉತ್ತೇಜನಕ್ಕೆ ಸಂಬಂಧಿಸಿ ಇಂದಿನ ಯುವಜನರಿಗೆ ತಿಳಿ ಹೇಳುವಂತೆ ಅವರು ತಮ್ಮ ಆದೇಶದಲ್ಲಿ ಕರೆ ನೀಡಿದ್ದಾರೆ ಎಂದರು.

ಐಸಿವೈಎಮ್ ಕುಂತಳನಗರ ಘಟಕದ ಅಧ್ಯಕ್ಷ ಎಂಟನಿ ಪ್ರಜ್ವಲ್ ಮೆಂಡೊನ್ಸಾಮಾತನಾಡಿ ನೇಜಿ ನಾಟಿ ನಮಗೆ ಒಂದು ಹೊಸ ಅನುಭವವಾಗಿದ್ದು, ಪರಿಸರ ಸಂಬಂಧಿಸಿ ಹಲವಾರು ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದರೂ ಕೂಡ ಖುದ್ದಾಗಿ ಗದ್ದೆಯಲ್ಲಿ ನಾಟಿ ಕಾರ್ಯದಲ್ಲಿ ಭಾಗವಹಿಸಿರುವುದ ನಮ್ಮ ಮನಸ್ಸಿಗೆ ಸಂತೋಷ ನೀಡುತ್ತದೆ. ನಾಟಿ ಮಾಡುವ ಕಾರ್ಯಕ್ರಮ ನಮ್ಮ ಇತರ ಯುವಜನರಿಗೆ ಮಾದರಿಯಾಗುವುದರೊಂದಿಗೆ ಇಂತಹ ಕಾರ್ಯಕ್ರಮಗಳು ಮುಂದುವರಿಸಿಕೊಂಡು ಹೋಗಿ ಯುವಜನರು ಕೃಷಿಯತ್ತ ಆಕರ್ಷಿತರಾಗಲು ಸಹಾಯವಾಗುತ್ತದೆ ಎಂದರು.

ಚರ್ಚಿನ ಉಪಾಧ್ಯಕ್ಷ ವಲೇರಿಯನ್ ಮಥಾಯಸ್ ಮಾತಾಡಿ ನಮ್ಮ ಪೂರ್ವಜರು ಗದ್ದೆಗಳಲ್ಲಿ ಕೆಲಸಮಾಡಿ ತಮ್ಮ ತಮ್ಮ ಕುಟುಂಬವನ್ನು ಸುಖವಾಗಿ ಪೋಷಣೆ ಮಾಡುತ್ತಿದ್ದರು ಆದರೆ ಇಂದು ಕೃಷಿ ಮಾಡುವುದು ನಶಿಸುತ್ತಿದೆ. ನಮ್ಮ ಯುವಜನರಿಗೆ ಕೃಷಿಯ ಬಗ್ಗೆ ಆಸಕ್ತಿ ಬರುವಂತೆ ಮಾಡಿ ಅವರನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು ಅಲ್ಲದೆ ಮುಂದಿನ ದಿನಗಳಲ್ಲಿ ಪಾಳು ಬಿದ್ದ ಗದ್ದೆಗಳಲ್ಲಿ ಕೂಡ ಕೃಷಿ ಮಾಡಲು ನಮ್ಮ ಯುವಕರಿಗೆ ಪ್ರೇರಣೆಯಾಗಲಿ ಎನ್ನುವುದು ನಮ್ಮ ಉದ್ದೇಶ  ಎಂದರು.


Spread the love

Exit mobile version