ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ಸಿನ ಅಧ್ಯಕ್ಷ ಪಕ್ಷಕ್ಕೆ ಮಾರಕ – ಕಾಪು ದಕ್ಷಿಣ ಯುವ ಕಾಂಗ್ರೆಸ್ ಅಧ್ಯಕ್ಷ ಗೌರೀಶ್ ಕೋಟ್ಯಾನ್
ಉಡುಪಿ: ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ತುಚ್ಛವಾಗಿ ಮಾತಾಡಿ ಬಿಜೆಪಿಗರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡಲು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷನು ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕಾಪು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಗೌರೀಶ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವರು ಹಾಗೂ ಮಾಜಿ ಶಾಸಕರ ಬಗ್ಗೆ ಕೆಲವು ದಿನಗಳ ಹಿಂದೆ ಆಧಾರ ರಹಿತ ಆರೋಪವನ್ನು ಮಾಡಿ ಕಾಂಗ್ರೆಸ್ ಪಕ್ಷದ ವರಿಷ್ಠರು ಹಾಗೂ ರಾಜ್ಯ ಯುವ ಕಾಂಗ್ರೆಸ್ ಸಮಿತಿಯಿಂದ ಎಚ್ಚರಿಕೆಯನ್ನು ನೀಡಲಾಗಿತ್ತು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಉತ್ಸಾಹಿ ನಾಯಕರಾದ ಮುನಿಯಾಲು ಉದಯ್ ಶೆಟ್ಟಿ ಅವರ ಸಂಪೂರ್ಣ ಬೆಂಬಲದಿಂದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಕೊಡಲಿಯ ಕಾವು ಕುಲಕ್ಕೆ ಮೃತ್ಯು ಎಂಬಂತೆ ತಾನು ಬೆಳೆಯಲು ಅವಕಾಶವನ್ನು ಕಲ್ಪಿಸಿಕೊಟ್ಟ ನಾಯಕನ ವಿರುದ್ಧವೇ ಅಪಪ್ರಚಾರ ಮಾಡಲು ಹೊರಟಿರುವ ಕೃಷ್ಣ ಶೆಟ್ಟಿ ಬಜಗೋಳಿ ಇದೀಗ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದ್ದು ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗುವಂತಿದೆ.
ಈ ಕೂಡಲೇ ಈ ತುರ್ತು ಪರಿಸ್ಥಿತಿಯನ್ನು ಪಕ್ಷದ ವರಿಷ್ಠರು, ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಉಡುಪಿ ಜಿಲ್ಲೆಯ ಯುವ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿಗಳು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಕಾಪು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಗೌರೀಶ್ ಕೋಟ್ಯಾನ್ ಅವರು ಮಾಧ್ಯಮಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.