ಉಡುಪಿ: ಉಡುಪಿ ಜಿಲ್ಲೆಯ ಕಟಪಾಡಿಯ ಸುಲತಾ ಕಾಮತ್ ಅವರು ಶ್ರೀಲಂಕಾದ ಕೊಲಂಬೋದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್‌ನಲ್ಲಿ ಮತ್ತೆ 2 ಬೆಳ್ಳಿ ಹಾಗೂ 1 ಕಂಚಿನ ಪದಕಗಳಿಗೆ ಕೊರಳೊಡ್ಡಿದ್ದಾರೆ.
ಮಹಿಂದ್ರಾ ರಾಜಾಪಕ್ಷ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾದ ಮಾಸ್ಟರ್ ಅಥ್ಲೆಟಿಕ್ಸ್‌ನ 2ನೇ ವಾರ್ಷಿಕ (ಮುಕ್ತ) ಚಾಂಪಿಯನ್ ಶಿಪ್ ವಿಭಾಗದಲ್ಲಿ 58ರ ಹರೆಯದ ಸುಲತಾ ಕಾಮತ್ 5 ಕಿ.ಮೀ ಓಟದಲ್ಲಿ ಮತ್ತು ನಡಿಗೆಯಲ್ಲಿ ಬೆಳ್ಳಿಯ ಪದಕಗಳನ್ನು ಗಿಟ್ಟಿಸಿಕೊಂಡರೆ, 1,500 ಮೀ ಓಟದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
3 ಮಕ್ಕಳ ತಾಯಿಯಾಗಿರುವ ಅವರು ಕಟಪಾಡಿಯಲ್ಲಿನ ನೈಟ್ ಕ್ಯಾಂಟೀನ್‌ನಲ್ಲಿನ ದುಡಿದ ಹಣದಿಂದ ಈ ಅಥ್ಲೆಟಿಕ್‌ನಲ್ಲಿ ಪಾಲ್ಗೊಂಡಿದ್ದು, ತನ್ನಲ್ಲಿ ‘ಕ್ರೀಡೆಯ ಬಗೆಗಿನ ಆಸಕ್ತಿ ಇನ್ನೂ ಬತ್ತಿಲ್ಲ’ ಎಂಬುವುದನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.
ಸುಲತಾ ಕಾಮತ್ ಬಿಸಿಲಿನಲ್ಲಿ ಬರಿಗಾಲಲ್ಲೇ ಬಿಸಿಯಾದ ಆ ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಓಡುವ ಸಾಹಸಕ್ಕೆ ಕೈ ಹಾಕಿರುತ್ತಾರೆ. ಇದುವರೆಗಿನ ಎಲ್ಲಾ ಅಥ್ಲೆಟಿಕ್ಸ್ ಪದಕಗಳನ್ನು ಕೂಡಾ ಇವರು ಬರಿಗಾಲಲ್ಲಿ ಓಡಿ ಬೇಟೆಯಾಡಿರುವುದು ಇವರ ಸಾಧನೆಯಾಗಿದೆ. ತನ್ನ ಮಕ್ಕಳಿಗೂ ಕ್ರೀಡಾ ತರಬೇತಿ ನೀಡುತ್ತಿದ್ದಾರೆ.
‘ಇನ್ನಷ್ಟೂ ಪ್ರೋತ್ಸಾಹ, ಬೆಂಬಲ, ಪ್ರಾಯೋಜಕರು ದೊರೆತಲ್ಲಿ ಮತ್ತಷ್ಟು ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಹಂಬಲ, ಜೊತೆಗೆ ಪದಕಗಳ ಪಡೆದು ಕ್ರೀಡಾಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವ ತುಡಿತವಿದೆ’ ಎಂದು ಸುಲತಾ ಕಾಮತ್ ಅವರು ಹೇಳುತ್ತಾರೆ.