ಉತ್ತಮ ಭವಿಷ್ಯಕ್ಕಾಗಿ ಪರಿಸರವನ್ನು ರಕ್ಷಿಸಿ : ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್.ಕೆ
ಮಂಗಳೂರು: ಶುದ್ಧ ವಾತಾವರಣದ ಜೀವನಕ್ಕಾಗಿ ಹಾಗೂ ನೆಲಜಲದ ಸಂರಕ್ಷಣೆಗೆ ಮರಗಳನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್.ಕೆ ತಿಳಿಸಿದ್ದಾರೆ.
ಅವರು ಗುರುವಾರ ಪಡೀಲ್ ಪ್ರಜಾಸೌಧ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳಿಂದ ಪರಿಸರವು ನಾಶಗೊಂಡು ನಮ್ಮ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಭೂಮಿ ಮೇಲೆ ಹಸಿರಿನ ಪ್ರಮಾಣವನ್ನು ಹೆಚ್ಚಿಸಬೇಕಾದ ಅಗತ್ಯತೆ ಇದೆ ಎಂದು ಅವರು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ಮಾತನಾಡಿ, ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಮರಗಳನ್ನು ಕಡಿಯಬೇಕಾದ ಅನಿವಾರ್ಯತೆ ಬರುತ್ತಿವೆ. ಕಳೆದ ವರ್ಷ ಜಿಲ್ಲೆಯಲ್ಲಿ 1.39 ಲಕ್ಷ ಮರಗಳನ್ನು ತೆಗೆಯಲಾಗಿದೆ. ಅದಕ್ಕೆ ಪರ್ಯಾಯವಾಗಿ ಪ್ರತಿ ವರ್ಷ 5 ಲಕ್ಷ ಅಧಿಕ ಗಿಡಗಳನ್ನು ನೆಟ್ಟು ಪರಿಸರ ಸಮತೋಲನ ಕಾಪಾಡಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ನಗರ ಪ್ರದೇಶದಲ್ಲಿ ತಾಪಮಾನ ಹೆಚ್ಚಾಗಲು ಮರಗಳ ಸಂಖ್ಯೆ ಕುಸಿಯುತ್ತಿರುವುದೇ ಕಾರಣವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸಂತೋμï ಜಿ, ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಪಿಲಿಕುಳ ಆಯುಕ್ತ ಅರುಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ರಾಜೇಶ್, ಸಿ.ಎಫ್.ಎ.ಎಲ್ ಪ್ರಾಂಶುಪಾಲೆ ಡಾ.ಸ್ಮಿತಾ ಹೆಗ್ಡೆ, ಚೈತ್ರಾ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ. ರಶ್ಮಿ.ಕೆ ಸ್ವಾಗತಿಸಿದರು.
ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಎನ್.ಸಿ.ಸಿ, ಅರಣ್ಯ ಇಲಾಖೆ, ಸಿ.ಎಫ್.ಎ.ಎಲ್, ರೋಟರಿ ಮತ್ತು ಲಯನ್ಸ್ ಕ್ಲಬ್ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.