ಉಪ್ಪಿನಂಗಡಿ : ನದಿ ನೀರಿನ ಮಟ್ಟದಲ್ಲಿ ಸಂಪೂರ್ಣ ಕುಸಿತ, ಜನರಲ್ಲಿ ಆತಂಕ
ಸಂಗಮ ತಾಣವೆಂದು ಪ್ರಸಿದ್ದಿ ಪಡೆದಿರುವ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹರಿಯುತ್ತಿರುವ ನದಿಯಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿತ ಕಂಡಿದ್ದು, ಮರಳು ಕಾಣುತ್ತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ವರ್ಷ 2025 ರ ಜೂನ್ ತಿಂಗಳ 15 ರಂದು ನದಿಯ ನೀರಿನ ಮಟ್ಟ ಹಾಗೂ 2026 ರ ಜೂನ್ ತಿಂಗಳ 15 ರಂದು ನದಿಯ ನೀರಿನ ಮಟ್ಟವನ್ನು ಹೋಲಿಕೆ ಮಾಡಿದ ಫೋಟೋ ಸಖತ್ ವೈರಲ್ ಆಗಿದೆ. ನೇತ್ರಾವತಿ – ಕುಮಾರಧಾರ ಸಂಗಮ ಕ್ಷೇತ್ರ ಎಂದೇ ಖ್ಯಾತಿ ಪಡೆದ ನದಿ ಈ ವರ್ಷ ನೀರಿಲ್ಲದೆ ಸೊರಗಿ ಹೋಗಿರುವ ದೃಶ್ಯ ಇಡೀ ಜನತೆಗೆ ಆತಂಕ ಉಂಟು ಮಾಡಿದೆ.
ಕಳೆದ ವರ್ಷ ಮೇ 17 ರಂದು ಆರಂಭವಾದ ಮಳೆ ಬಳಿಕ ನಿರಂತರವಾಗಿ ಸುರಿದು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರನ ಸನ್ನಿಧಿಯಲ್ಲಿ ನೇತ್ರಾವತಿ – ಕುಮಾರಧಾರ ಸಂಗಮವಾಗಿತ್ತು. ಹೀಗಿರುವಾಗ ಈ ಬಾರಿ ಮಳೆರಾಯನ ಆಗಮನವಾಗಿದ್ದೇ ತಡವಾಗಿ.
ಇದೀಗ ಬೇಸಿಗೆ ಕಾಲದ ಬಿಸಿಲಿನಂತೆ ಸುಡುತ್ತಿರುವ ತಾಪಕ್ಕೆ ನದಿಯಲ್ಲಿ ನೀರು ಬತ್ತಿ ಹೋಗಿರುವುದು ಕೃಷಿಕರಲ್ಲಿ ಆತಂಕವನ್ನು ಹೆಚ್ಚು ಮಾಡಿದೆ. ನಿಗದಿತ ಸಮಯದಲ್ಲಿ ನಿಗದಿತ ಪ್ರಮಾಣದಲ್ಲಿ ಮಳೆರಾಯನ ಆಗಮನವಾಗದೆ ಇದ್ದ ಕಾರಣದಿಂದ ಭತ್ತದ ಕೃಷಿ ಕಾರ್ಯ ವಿಳಂಬವಾಗಿದೆ.
ಹೀಗಾಗಿ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಪ್ರಕೃತಿಯ ವೈಪರೀತ್ಯದಿಂದ ಭತ್ತದ ಕೃಷಿ ಜೊತೆ ಪ್ರಾಣಿ ಪಕ್ಷಿ ಹಾಗೂ ಇತರ ಜೀವಜಂತುಗಳ ವಂಶವಾಹಿಗಳ ಸಂಖ್ಯೆಯಲ್ಲಿ ಏರುಪೇರು ಕಾಣುವ ಲಕ್ಷಣಗಳು ಇವೆ ಎಂದು ಹೇಳಲಾಗುತ್ತಿದೆ.
