Home Mangalorean News Kannada News ಉಳ್ಳಾಲ ಕೋಡಿ ನದಿ ತೀರಕ್ಕೆ ಎಬಿ ಇಬ್ರಾಹೀಂ ಭೇಟಿ

ಉಳ್ಳಾಲ ಕೋಡಿ ನದಿ ತೀರಕ್ಕೆ ಎಬಿ ಇಬ್ರಾಹೀಂ ಭೇಟಿ

Spread the love

ಉಳ್ಳಾಲ ಕೋಡಿ ನದಿ ತೀರಕ್ಕೆ ಎಬಿ ಇಬ್ರಾಹೀಂ ಭೇಟಿ

ಮಂಗಳೂರು: ರಾಜ್ಯ ಪಶುಸಂಗೋಪನೆ, ಮೀನುಗಾರಿಕೆ ಹಾಗೂ ಅಲ್ಪಸಂಖ್ಯಾತರ ಇಲಾಖೆಯ ಕಾರ್ಯದರ್ಶಿ ಎ.ಬಿ.‌ ಇಬ್ರಾಹಿಂ ಶುಕ್ರವಾರ ಉಳ್ಳಾಲ ಕೋಡಿ ನದಿ‌ ತೀರಕ್ಕೆ ಭೇಟಿ ಮೀನುಗಾರರೊಂದಿಗೆ‌ ಚರ್ಚಿಸಿದರು.

ಬಳಿಕ ಮಾತನಾಡಿದ ಅವರು, ಮೀನುಗಾರರ ಬೋಟು ಬರಲು ಅನುಕೂಲವಾಗುವ ನಿಟ್ಟಿನಲ್ಲಿ ಉಳ್ಳಾಲದ ಕೋಡಿಗೆ ಬೋಟು ಜೆಟ್ಟಿ ಮಂಜೂರಾಗಿದ್ದು ಮಳೆಗಾಲಕ್ಕೆ ಮೊದಲು, ಅಥವಾ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಕೋಡಿಯಲ್ಲಿ ಸದ್ಯ 82 ಮೀಟರ್ ಉದ್ದದ ಜೆಟ್ಟಿ, ಅದರ ನಡುವೆ ಎಂಟು ಮೀಟರ್ ರ್ಯಾಂಪ್ ನಿರ್ಮಾಣ ಆಗಲಿದ್ದು, 4.80 ಕೋ.ರೂ.ಮಂಜೂರಾಗಿದೆ. ಹೆಜಮಾಡಿಯಲ್ಲಿ ಜೆಟ್ಟಿ ನಿರ್ಮಾಣಕ್ಕೆ 185 ಕೋ.ರೂ. ಮಂಜೂರಾಗಿದೆ ಎಂದರು. ಕೋಡಿಯಲ್ಲಿ ಬೋಟುಗಳು ಎಷ್ಟಿದೆ ಎನ್ನುವ ಆಧಾರದಲ್ಲಿ ಬೃಹತ್ ಜೆಟ್ಟಿ ಬೇಕೋ, ಬೇಡವೋ ಎನ್ನುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲೈಟ್ ಫಿಶಿಂಗ್ ಸಮಸ್ಯೆ ಮಾಹಿತಿ

ಈ ಸಂದರ್ಭ ಉಳ್ಳಾಲ ಭಾಗದಲ್ಲಿ ನಿಷೇಧಿತ ಲೈಟ್ ಫಿಶಿಂಗ್ ಸಮಸ್ಯೆ ಬಗ್ಗೆ ನಾಡದೋಣಿ ಮೀನುಗಾರರ ಸಂಘದ ಪದಾಧಿಕಾರಿಗಳು ಅಳಲು ತೋಡಿಕೊಂಡರು. ಕೇರಳದಲ್ಲಿ ಲೈಟ್ ಫಿಶಿಂಗ್‌ಗೆ ಐದೂಕಾಲು ಲಕ್ಷ ರೂ.‌ದಂಡ ಇದೆ, ಆದರೆ ನಮ್ಮಲ್ಲಿ ಐದು ಸಾವಿರ ಮಾತ್ರ ದಂಡ ಹಾಕಲಾಗುತ್ತಿದೆ ಎಂದರು.

ಅಲ್ಲದೆ ಮೀನುಗಾರರು ಇದೇ ವೃತ್ತಿ ನಂಬಿ ಬದುಕುತ್ತಿರುವುದರಿಂದ 60 ವಯಸ್ಸು ಪ್ರಾಯ ಆದವರಿಗೆ ಸರಕಾರದಿಂದ ಭತ್ತೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.

ಮನವಿ ಆಲಿಸಿದ ಇಬ್ರಾಹಿಂ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಸರಕಾರಕ್ಕೆ ಪತ್ರ ಬರೆಯಲು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ತಿಪ್ಪೇಗೌಡ ಅವರಿಗೆ ಸೂಚನೆ ನೀಡಿದರು.

ಬೃಹತ್ ಜೆಟ್ಟಿ ಒದಗಿಸಿ

ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ಉಳ್ಳಾಲದಲ್ಲಿ ಮುಸ್ಲಿಮರು ಮತ್ತು ಮೊಗವೀರರು ಮೀನುಗಾರಿಕೆ ವೃತ್ತಿ ನಂಬಿದ್ದಾರೆ. ಕೋಡಿಯಲ್ಲಿ ನಿರ್ಮಾಣ ಆಗಲಿರುವ ಜೆಟ್ಟಿ ಕೇವಲ ನಾಡದೋಣಿಗಳಿಗೆ ಸೀಮಿತವಾಗಲಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರ ಇನ್ನಷ್ಟು ಅನುಕೂಲಕ್ಕಾಗಿ ಬೃಹತ್ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಆಗಬೇಕಿದೆ ಎಂದು ಅಹವಾಲು ಸಲ್ಲಿಸಿದರು.

ಈ ಸಂದರ್ಭ ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷ ಮೋನು ಇಸ್ಮಾಯಿಲ್, ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಸೋಲಾರ್ ಹನೀಫ್, ಕಾರ್ಯದರ್ಶಿ ಅಬ್ದುಲ್ ಗಣಿಫು ಉಳ್ಳಾಲ್, ಕೋಶಾಧಿಕಾರಿ ಮುಹಮ್ಮದ್ ರಫೀಕ್, ಯು.ಕೆ.ಇಸ್ಮಾಯಿಲ್ ಪೈಲೆಟ್, ಮಯ್ಯದ್ದಿ, ಬಂದರು ಇಲಾಖೆಯ ಕಾರ್ಯನಿರ್ವಾಹಕ‌ ಅಭಿಯಂತರ ಚಂದ್ರಶೇಖರ, ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ‌ಅಬ್ಬಾಸ್, ಸ್ಥಳೀಯರಾದ ಎ.ಆರ್. ನಝೀರ್ ಕೋಡಿ, ಅಹ್ಮದ್ ಬಾವ ಕೊಟ್ಟಾರ, ಆಸಿಫ್ ಅಬ್ದುಲ್ಲಾ, ರಫೀಕ್ ಕೋಡಿ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version