Home Mangalorean News Kannada News ಉಳ್ಳಾಲ ಮೂಲದ ಮಹಿಳೆ ಮಿನ್ನತ್ ಚಿನ್ನದ ಸರ ಕಳ್ಳತನ ಪ್ರಕರಣದಲ್ಲಿ ಬಂಧನ

ಉಳ್ಳಾಲ ಮೂಲದ ಮಹಿಳೆ ಮಿನ್ನತ್ ಚಿನ್ನದ ಸರ ಕಳ್ಳತನ ಪ್ರಕರಣದಲ್ಲಿ ಬಂಧನ

Spread the love

ಉಳ್ಳಾಲ ಮೂಲದ ಮಹಿಳೆ ಮಿನ್ನತ್ ಚಿನ್ನದ ಸರ ಕಳ್ಳತನ ಪ್ರಕರಣದಲ್ಲಿ ಬಂಧನ

  • ₹1.80 ಲಕ್ಷ ಮೌಲ್ಯದ 18 ಗ್ರಾಂ ಚಿನ್ನದ ಸರಗಳು ವಶ

ಮಂಗಳೂರು: ಉಳ್ಳಾಲದ ನಿವಾಸಿ ಶ್ರೀಮತಿ ಮಿನ್ನತ್ ಅವರನ್ನು ಚಿನ್ನದ ಸರ ಕಳ್ಳತನದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿತೆಯ ವಶದಿಂದ ಒಟ್ಟು 18 ಗ್ರಾಂ ತೂಕದ, ಸುಮಾರು ರೂ. 1.80 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ಪ್ರಕಾರ, ಜೂನ್ 2, 2025ರಂದು ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮದ ನಿವಾಸಿ ಶ್ರೀಮತಿ ರಹಮತ್ ಅವರು ತಮ್ಮ ಮಕ್ಕಳೊಂದಿಗೆ ತೊಕ್ಕೊಟ್ಟು ಗ್ರಾಮದಲ್ಲಿನ “ಸಾಗರ ಕಲೆಕ್ಷನ್” ಅಂಗಡಿಗೆ ಬಟ್ಟೆ ಖರೀದಿಸಲು ತೆರಳಿದ್ದರು. ಮಳೆಯ ಕಾರಣಕ್ಕೆ “ಸ್ಟ್ರೀಟ್ ಪ್ಯಾಲೇಸ್ ಬೇಕರಿ” ಎದುರು ನಿಂತಿದ್ದಾಗ, ಅವರ ಮಗಳ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಬುರ್ಖಾ ಧರಿಸಿದ್ದ ಮಹಿಳೆ ಕಿತ್ತುಕೊಂಡು ಪರಾರಿಯಾಗಿದ್ದಳು. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ.ನಂ. 8/2025, ಕಲಂ 304(2), ಬಿ.ಎನ್.ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಮುಂದುವರಿಸಿದ ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ, ಮಾಹಿತಿ ಆಧಾರವಾಗಿ ಸೆಪ್ಟೆಂಬರ್ 12ರಂದು ಆರೋಪಿ ಮಿನ್ನತ್ ಅವರನ್ನು ವಶಕ್ಕೆ ಪಡೆದರು. ಆರೋಪಿತೆಯಿಂದ ಕಳವಾಗಿದ್ದ 10 ಗ್ರಾಂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಯಿತು.

ವಿಚಾರಣೆ ಸಂದರ್ಭದಲ್ಲಿ, ಮಿನ್ನತ್ ಅವರು 2025ರ ಜುಲೈ 9ರಂದು ಪಜೀರ್‌ನ ಕೆಎಂಎಸ್ ಕನ್ವೆನ್‌ಷನ್ ಹಾಲ್‌ನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಬ್ಯಾಗಿನಿಂದ 8 ಗ್ರಾಂ ತೂಕದ ಚಿನ್ನದ ಸರವನ್ನು ಕೂಡ ಕಳವು ಮಾಡಿದ್ದಾಗಿ ಒಪ್ಪಿಕೊಂಡರು. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 107/2025, ಕಲಂ 303(2), ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳವಾಗಿದ್ದ ಸರವನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಮಿನ್ನತ್ ಅವರನ್ನು ಇದೇ ದಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಒಟ್ಟಾರೆ 18 ಗ್ರಾಂ ತೂಕದ, ರೂ. 1.80 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿತೆಯ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಿದ್ದಾರೆ.


Spread the love

Exit mobile version