Home Uncategorized ಎನ್‌ಎಂಪಿಎಯಿಂದ ಶಿಷ್ಟಾಚಾರ ಉಲ್ಲಂಘನೆ ಆರೋಪ : ದ.ಕ. ಉಸ್ತುವಾರಿ ಸಚಿವರ ಆಕ್ಷೇಪ- ಕೇಂದ್ರ ಸಚಿವರಿಗೆ ಪತ್ರ

ಎನ್‌ಎಂಪಿಎಯಿಂದ ಶಿಷ್ಟಾಚಾರ ಉಲ್ಲಂಘನೆ ಆರೋಪ : ದ.ಕ. ಉಸ್ತುವಾರಿ ಸಚಿವರ ಆಕ್ಷೇಪ- ಕೇಂದ್ರ ಸಚಿವರಿಗೆ ಪತ್ರ

Spread the love

ಎನ್‌ಎಂಪಿಎಯಿಂದ ಶಿಷ್ಟಾಚಾರ ಉಲ್ಲಂಘನೆ ಆರೋಪ : ದ.ಕ. ಉಸ್ತುವಾರಿ ಸಚಿವರ ಆಕ್ಷೇಪ- ಕೇಂದ್ರ ಸಚಿವರಿಗೆ ಪತ್ರ

ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ)ದ ಸುವರ್ಣ ಮಹೋತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಮಂತ್ರಣ ನೀಡದೆ ಅಗೌರವ ತೋರಲಾಗಿದೆ ಎಂದು ಆಕ್ಷೇಪಿಸಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಹಾಗೂ ಎನ್‌ಎಂಪಿಎ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ಪಣಂಬೂರಿನ ಡಾ. ಬಿ.ಆರ್.ಅಂಬೇಡ್ಕರ್ ಸ್ಟೇಡಿಯಂನಲ್ಲಿ ನ. 13ರಂದು ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಭಾರತ ಸರಕಾರದ ವಿವಿಧ ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಆದರೆ ಉಸ್ತುವಾರಿ ಸಚಿವರನ್ನು ಆಹ್ವಾನಿಸದಿರುವುದು ವಿಷಾದನೀಯ. ಶಿಷ್ಟಾಚಾರದ ಉಲ್ಲಂಘನೆ ಕೆಲವೊಮ್ಮೆ ಅಜ್ಞಾನದಿಂದ ಆಗಿರಬಹುದು. ಆದರೆ ಈ ಕಾರ್ಯಕ್ರಮದಲ್ಲಿ ಅದು ಉದ್ದೇಶಪೂರ್ವಕವಾಗಿ ಮಾಡಿರುವಂತೆ ತೋರುತ್ತದೆ. ಬಿಜೆಪಿಯ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳನ್ನು ಆಹ್ವಾನಿಸಲು ಎನ್‌ಎಂಪಿಎ ಮರೆತಿಲ್ಲ. ಕಳೆದ ಐದು ದಶಕದಲ್ಲಿ ನವ ಮಂಗಳೂರು ಬಂದರು ರಾಷ್ಟಕ್ಕೆ ಸಲ್ಲಿಸಿದ ಸೇವೆಯ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಪ್ರಸಕ್ತ ಬಂದರು ಆಡಳಿತವು ತನ್ನ ರಾಜಕೀಯ ಯಜಮಾನರಿಗೆ ಬದ್ಧತೆಯನ್ನು ಪ್ರದರ್ಶಿಸಿದೆ. ರಾಜ್ಯ ಸರಕಾರಕ್ಕೆ ತೋರಿದ ಅಗೌರವದ ಹೊರತಾಗಿಯೂ ಪ್ರಾಧಿಕಾರ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂಬುದು ನನ್ನ ಆಶಯ. ಭವಿಷ್ಯದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳಲ್ಲಿ ಯಾರೇ ಅಧಿಕಾರದಲ್ಲಿದ್ದರೂ ಶಿಷ್ಟಾಚಾರವನ್ನು ಪಾಲಿಸುವ ಮೂಲಕ ಮಂಗಳೂರು ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎಂಬುದಾಗಿ ಗುರುತಿಸುತ್ತದೆಯೇ ವಿನಹ, ಬಂದರನ್ನು ಬಿಜೆಪಿಯ ಹೆಬ್ಬಾಗಿಲಾಗಿ ಪರಿಗಣಿಸದು ಎಂಬುದಾಗಿ ಆಶಿಸುತ್ತೇನೆ ಎಂದು ದಿನೇಶ್ ಗುಂಡೂರಾವ್ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Spread the love

Exit mobile version