ಎಸ್ಪಿ ನಿಂಬರ್ಗಿ ವರ್ಗಾಯಿಸದಂತೆ ಕೋಟ ಶ್ರೀನಿವಾಸ ಪೂಜಾರಿಯಿಂದ ಮುಖ್ಯಮಂತ್ರಿಗೆ ಪತ್ರ
ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಲಕ್ಷ್ಮಣ್ ಬ ನಿಂಬರಗಿ ಅವರು ಇತ್ತೀಚೆಗೆ ಭಾರತ್ ಬಂದ್ ವೇಳೆ ಉದ್ರಿಕ್ತ ಗುಂಪನ್ನು ಚದುರಿಸಲು ಕೈಗೊಂಡ ಕ್ರಮ ವಿರೋಧಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಸ್ಪಿಯವರ ವರ್ಗಾವಣೆಗೆ ಆಗ್ರಹಿಸಿರುವುದನ್ನು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ವಿರೋಧಿಸಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ವರ್ಗಾವಣೆ ಮಾಡದಂತೆ ಒತ್ತಾಯಿಸಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಲಕ್ಷ್ಮಣ್ ನಿಂಬರ್ಗಿ ಅವರು ಉಡುಪಿಯಲ್ಲಿ ಅಧಿಕಾರ ವಹಿಸಿಕೊಂಡು ಇನ್ನೂ ಒಂದು ವರ್ಷ ಕೂಡ ಪೂರ್ಣಗೊಂಡಿಲ್ಲ. ಯಾವುದೇ ಜಾತಿ, ವರ್ಗ, ಧರ್ಮ, ಪಕ್ಷಗಳನ್ನು ಗಮನಿಸದೆ ಅವರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಅವರ ಕಾರ್ಯವೈಖರಿ ಸಾರ್ವತ್ರಿಕ ಪ್ರಶಂಸೆಗೆ ಒಳಗಾಗಿದೆ.
ಈ ಮಧ್ಯೆ ಭಾರತ್ ಬಂದ್ ವೇಳೆ ಉದ್ರಿಕ್ತ ಗುಂಪನ್ನು ಚದುರಿಸಲು ಎಸ್ಪಿಯವರು ಕೈಗೊಂಡ ಕ್ರಮದ ಕುರಿತು ಕಾಂಗ್ರೆಸ್ ಪಕ್ಷದ ಮೂಲಗಳು ಅವರನ್ನು ರಾಜಕೀಯ ಪ್ರೇರಿತ ವರ್ಗಾವಣೆ ಮಾಡುವ ಆತಂಕವಿದೆ ಎಂದು ಮಾಧ್ಯಮಗಳು ಪ್ರಕಟಿಸಿವೆ.
ಸರಕಾರವೊಂದು ಆಡಳಿತಾತ್ಮಕ ಕಾರಣ ಹೊರತು ಪಡಿಸಿ ರಾಜಕೀಯ ಪ್ರೇರಿತ ಕಾರಣಗಳಿಗೆ ವರ್ಗಾವಣೆ ಮಾಡಿದರೆ ತಪ್ಪಾಗುತ್ತದೆ. ಆದ್ದರಿಂದ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಲಕ್ಷ್ಮಣ್ ಬಿ ನಿಂಬರಗಿ ಅವರನ್ನು ಉಡುಪಿ ಜಿಲ್ಲೆಯಿಂದ ವರ್ಗಾವಣೆ ಮಾಡಬಾರದು ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ.
