Home Mangalorean News Kannada News ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ರೂಬಿಕ್ ಕ್ಯೂಬ್ ಗಿನ್ನೆಸ್ ದಾಖಲೆಗೆ

ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ರೂಬಿಕ್ ಕ್ಯೂಬ್ ಗಿನ್ನೆಸ್ ದಾಖಲೆಗೆ

Spread the love

ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ರೂಬಿಕ್ ಕ್ಯೂಬ್ ಗಿನ್ನೆಸ್ ದಾಖಲೆಗೆ

ಉಜಿರೆ: ವಿದ್ಯಾರ್ಥಿಗಳು ರೂಬಿಕ್ ಕ್ಯೂಬ್ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಾಹಿತ್ಯ, ಕಲೆ, ಸಂಶೋಧನೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಭಾನುವಾರ ಧರ್ಮಸ್ಥಳದಲ್ಲಿ ತಮ್ಮ ನಿವಾಸದಲ್ಲಿ ಉಜಿರೆಯ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ರೂಬಿಕ್ಸ್ ಕ್ಯೂಬ್ ರಚನೆಗಾಗಿ ದೊರಕಿದ ಗಿನ್ನೆಸ್ ವಿಶ್ವ ದಾಖಲೆ ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದರು.

ರೂಬಿಕ್ಸ್ ಕ್ಯೂಬ್ ರಚನೆಯಿಂದ ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಮಿದುಳು, ಕೈ ಮತ್ತು ಕಣ್ಣಿನ ಸಂಯೋಜನೆಯ ಸಾಮಥ್ರ್ಯ ಹೆಚ್ಚಾಗುತ್ತದೆ. ಧರ್ಮಸ್ಥಳದಿಂದ ನಡೆಸಲ್ಪಡುವ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ಪ್ರೋತ್ಸಾಹ ಮತ್ತು ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು. ಈಗಾಗಲೆ ಕೆಲವು ಶಾಲಾ-ಕಾಲೇಜುಗಳಲ್ಲಿ ರೂಬಿಕ್ಸ್ ಕ್ಯೂಬ್ ರಚನೆ ಬಗ್ಯೆ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿ ಮಾಹಿತಿ ನೀಡಲಾಗಿದೆ.

ಗಿನ್ನೆಸ್ ದಾಖಲೆಗೆ ಸೇರ್ಪಡೆ:
ಉಜಿರೆಯ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಪದವಿ ತರಗತಿ ವಿದ್ಯಾರ್ಥಿ ಪೃಥ್ವೀಶ್ ಕೆ. ಭಟ್ ನೇತೃತ್ವದಲ್ಲಿ ಇಪ್ಪತ್ತು ವಿದ್ಯಾರ್ಥಿಗಳ ತಂಡವು 2016ರ ಅಕ್ಟೋಬರ್ 2 ರಂದು ಉಜಿರೆಯಲ್ಲಿ ಇಂದ್ರಪ್ರಸ್ಥ ಒಳಾಂಗಣದಲ್ಲಿ 4500 ಕ್ಯೂಬ್‍ಗಳನ್ನು ಬಳಸಿ ಒಟ್ಟು 14.981 ಚದರ ಮೀಟರ್ ವಿಸ್ತೀರ್ಣದ ಮೊಸಾೈಕನ್ನು ರಚಿಸಿತು. ಇದರ ತಯಾರಿಗೆ ನಾಲ್ಕು ಲಕ್ಷ ರೂ. ವೆಚ್ಚವಾಗಿದೆ.

ವಿವೇಕ್ ಪ್ರಸಾದ್ ಮಾಡ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಶಿವಪ್ರಸಾದ ಅಜಿಲ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಭಟ್ ಕುಳಮರ್ವ ಇದನ್ನು ವೀಕ್ಷಿಸಿ ಪ್ರಮಾಣೀಕರಿಸಿದರು.

ಪೂರ್ಣಕಾರ್ಯವನ್ನು ವೀಡಿಯೊ ದಾಖಲಿಕರಣಗೊಳಿಸಿ ಲಂಡನ್‍ನಲ್ಲಿರುವ ಗಿನ್ನೆಸ್ ದಾಖಲೆಯ ಪ್ರಧಾನ ಕಚೇರಿಗೆ ಕಳುಹಿಸಲಾಯಿತು.

2017ರ ಜನವರಿ 13ರಂದು ಇದು ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿರುವುದಾಗಿ ಸಂದೇಶ ಬಂದಿದ್ದು ಇದೀಗ ಪ್ರಮಾಣ ಪತ್ರವೂ ಬಂದಿದೆ.

ಭಾನುವಾರ ಹೆಗ್ಗಡೆಯವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

ಹೇಮಾವತಿ ವಿ. ಹೆಗ್ಗಡೆಯವರು, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸುರೇಶ್ ಹಾಗೂ ಪೃಥ್ವೀಶ್ ಕೆ. ಭಟ್‍ನ ತಂದೆ ಪ್ರಸಾದ್ ಮತ್ತು ತಾಯಿ ಪ್ರಸನ್ನ ಉಪಸ್ಥಿತರಿದ್ದರು.


Spread the love

Exit mobile version