Home Mangalorean News Kannada News ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಧರ್ಮಸ್ಥಳದಲ್ಲಿ: ರಾಜಕೀಯ ರಹಿತ ಖಾಸಗಿ ಭೇಟಿ

ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಧರ್ಮಸ್ಥಳದಲ್ಲಿ: ರಾಜಕೀಯ ರಹಿತ ಖಾಸಗಿ ಭೇಟಿ

Spread the love

ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಧರ್ಮಸ್ಥಳದಲ್ಲಿ: ರಾಜಕೀಯ ರಹಿತ ಖಾಸಗಿ ಭೇಟಿ
 ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಶುಕ್ರವಾರ ಮಧ್ಯಾಹ್ನ ಹೆಲಿಕಾಪ್ಟರ್‍ನಲ್ಲಿ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಗೌರವಪೂರ್ವಕ ಸ್ವಾಗತ ಕೋರಲಾಯಿತು.
ಧರ್ಮಸ್ಥಳ ಹೆಲಿಪ್ಯಾಡ್‍ನಲ್ಲಿ ಹೆಗ್ಗಡೆಯವರ ಸಹೋದರ ಡಿ. ಸುರೇಂದ್ರ ಕುಮಾರ್ ಮಾಲೆ ಹಾಕಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
ಬಳಿಕ ಶ್ರೀ ಸನ್ನಿಧಿ ಅತಿಥಿಗೃಹಕ್ಕೆ ಹೋಗಿ ಹೆಗ್ಗಡೆಯವರ ಬೀಡಿಗೆ (ನಿವಾಸ) ಬಂದಾಗ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾಲೆ ಹಾಕಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು.
ಹತ್ತು ನಿಮಿಷಗಳ ಕಾಲ ಆತ್ಮೀಯ ಮಾತುಕತೆ ಬಳಿಕ ಹೆಗ್ಗಡೆಯವರೊಂದಿಗೆ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋದರು.
ಶತರುದ್ರಾಭಿಷೇಕ ಸೇವೆ: ರಾಹುಲ್ ಗಾಂಧಿ ದೇವರ ದರ್ಶನ ಬಳಿಕ ಸಂಕಲ್ಪ ಮಾಡಿ ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು. ಗಂಧವನ್ನು ಹಣೆಗೆ ಹಚ್ಚಿ, ತೀರ್ಥ ಪ್ರಸಾದ ಸ್ವೀಕರಿಸಿದರು. ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಎಲ್ಲಾ ಸಾನ್ನಿಧ್ಯಗಳ ದರ್ಶನ ಮಾಡಿ ಆಶೀರ್ವಾದ ಪಡೆದರು.
ಎರಡನೆ ಬಾರಿ ಭೇಟಿ: ಧರ್ಮಸ್ಥಳಕ್ಕೆ ರಾಹುಲ್ ಗಾಂಧಿಯವರದ್ದು ಎರಡನೆ ಭೇಟಿ ಆದುದರಿಂದ ಎಲ್ಲಾ ಸಿಬ್ಬಂದಿಯವರನ್ನೂ ಗುರುತಿಸಿ ಆತ್ಮೀಯವಾಗಿ ಮಾತನಾಡಿದರು ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.
ಹೆಗ್ಗಡೆಯವರ ಪ್ರಾರ್ಥನೆ: ರಾಜಕೀಯ ರಹಿತ ಖಾಸಗಿ ಭೇಟಿ ಇದಾಗಿದ್ದು ರಾಹುಲ್ ಗಾಂಧಿ ಅವರಿಗೆ ದೇವರು ದೀರ್ಘಾಯುರಾರೋಗ್ಯವನ್ನಿತ್ತು ಅವರ ನಾಯಕತ್ವಕ್ಕೆ ದೇವರ ಅನುಗ್ರಹವಿರಲೆಂದು ತಾನು ಪ್ರಾರ್ಥಿಸಿರುವುದಾಗಿ ಹೆಗ್ಗಡೆಯವರು ತಿಳಿಸಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ರಾಹುಲ್ ಗಾಂಧಿಗೆ ಸವಿವರವಾದ ವರದಿ ನೀಡಲಾಗಿದೆ. ಶೇ. 60ರಷ್ಟು ಸಾಧನೆ ಪೂರ್ಣಗೊಂಡಿದೆ. ಉತ್ತರ ಪ್ರದೇಶದಲ್ಲಿ ಕೂಡಾ ಇದೇ ಮಾದರಿಯ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಗೊಳಿಸುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ ಎಂದು ಹೆಗ್ಗಡೆಯವರು ಹೇಳಿದರು.
ಶ್ರೀ ಸನ್ನಿಧಿಯಲ್ಲಿ ಭೋಜನ ಸ್ವೀಕರಿಸಿದ ಬಳಿಕ ಹೆಲಿಕಾಪ್ಟರ್‍ನಲ್ಲಿ ಅವರು ಮಡಿಕೇರಿಗೆ ಪ್ರಯಾಣ ಬೆಳೆಸಿದರು.
ಮುಖ್ಯ ಮಂತ್ರಿ ಸಿದ್ಧರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಶಾಸಕರುಗಳಾದ ಕೆ. ವಸಂತ ಬಂಗೇರ ಮತ್ತು ಕೆ. ಅಭಯಚಂದ್ರ ಜೈನ್, ಎಂ.ಎನ್. ರಾಜೇಂದ್ರ ಕುಮಾರ್, ರಾಜ್ಯ ಚುನಾವಣಾ ಉಸ್ತುವಾರಿ ವೇಣುಗೋಪಾ¯, ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬೆಳ್ತಂಗಡಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನೆ ಹರೀಶ್ ಕುಮಾರ್, ದೇವಿಪ್ರಸಾದ್ ಶೆಟ್ಟಿ ಬೆಳಪು, ಸದಾಶಿವ ಉಳ್ಳಾಲ್,  ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದನ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಮೆನು: ಶುದ್ಧ ಸಸ್ಯಾಹಾರ ಭೋಜನ
ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ರಾಹುಲ್ ಗಾಂಧಿಯವರಿಗೆ ನೀಡಿದ ಊಟದ ಮೆನು: ಚಪಾತಿ ಮತ್ತು ಬಾಳೆಹಣ್ಣು ಪಲ್ಯ, ಪನೀರ್ ಮಟರ್, ಪಲಾವೋ, ದಾಲ್, ಗ್ರೀನ್ ಸಲಾಡ್, ಉಪ್ಪಿನಕಾಯಿ, ಅನ್ನ, ಸಾರು, ಸಾಂಬಾರು, ರಸಂ, ಮಜ್ಜಿಗೆ ಹುಳಿ, ಹಪ್ಪಳ, ಸಂಡಿಗೆ, ಬಾಳೆಹಣ್ಣು ಬಜ್ಜಿ, ಮೊಸರು, ಮಜ್ಜಿಗೆ.
ಸಿಹಿತಿಂಡಿಗಳು: ಹೋಳಿಗೆ, ಮಾವಿನಹಣ್ಣಿನ ರಸಾಯನ, ಗೋಧಿ ಕೇಕ್.

Spread the love

Exit mobile version