ಕಂಡ್ಲೂರಿನಲ್ಲಿ ದೃಷ್ಟಿ ಯೋಜನೆಗೆ ಜಿಲ್ಲಾ ಎಸ್‌ಪಿ ಹರಿರಾಮ್ ಶಂಕರ್ ಚಾಲನೆ
ಕುಂದಾಪುರ: ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಗಳಿದ್ದಲ್ಲಿ ಅಪರಾಧ ಪ್ರಕರಣಗಳು ಘಟಿಸುವುದಿಲ್ಲ ಹಾಗೂ ಸಾಮಾಜಿಕ ಸಾಮರಸ್ಯಕ್ಕೂ ಕೊರತೆಯಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಂಡ್ಲೂರಿನ ಭವಾನಿ ಸಂಜೀವ ಶೆಟ್ಟಿ ಹಾಲ್‌ನಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಲಾಖೆಯ ಮಹತ್ವಾಕಾಂಕ್ಷೆಯ ದೃಷ್ಟಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಂಡ್ಲೂರು ಪೊಲೀಸ್ ಠಾಣಾ ವ್ಯಾಪ್ತಿ ವಿಶಾಲವಾಗಿದ್ದು, 60,000 ದಷ್ಟು ಜನಸಂಖ್ಯೆ ಇದೆ. ಆದರೆ ಠಾಣೆಯಲ್ಲಿ ಕೇವಲ 28 ಮಂದಿ ಸಿಬ್ಬಂದಿಗಳಿದ್ದಾರೆ. ಕಾನೂನು ಸುವ್ಯವಸ್ಯತೆಯಂತಹ ನೂರಾರು ಕೆಲಸಗಳಿವೆ. ರಾತ್ರಿ ಗಸ್ತು ಮುಂತಾದ ಕೆಲಸಗಳಿಗೆ ತೊಡಕುಗಳಾಗುತ್ತಿದ್ದು, ಈ ನಿಟ್ಟಿನಲ್ಲಿ ದೃಷ್ಠಿ ಯೋಜನೆ ಆರಂಭಿಸಲಾಗಿದೆ. ಸರ್ಕಾರದ ಯಾವುದೇ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನವಾಗಬೇಕಾದಲ್ಲಿ ಸಾರ್ವಜನಿಕ ಸಹಭಾಗಿತ್ವ ಅತ್ಯಂತ ಅವಶ್ಯಕವಾಗಿದೆ. ಪಿಪಿಪಿ ಮಾದರಿಯಲ್ಲಿ ಕಾರ್ಯಾಚರಿಸುವ ದೃಷ್ಟಿ ಯೋಜನೆಯಡಿ ಕನಿಷ್ಠ 50 ಗುಂಪುಗಳನ್ನು ರಚಿಸುವ ಪ್ರಾರಂಭಿಕ ಗುರಿ ಇರಿಸಿಕೊಳ್ಳಲಾಗಿದೆ ಎಂದರು.
ಕಂಡ್ಲೂರು, ಗಂಗೊಳ್ಳಿ, ಕೋಡಿ ಭಾಗದಲ್ಲಿ ಹಿಂದೆ ಕೋಮು ಘರ್ಷಣೆಯಂತಹ ಕಹಿ ಘಟನೆಗಳು ನಡೆದಿದ್ದವು. ಆದರೆ ಪ್ರಸ್ತುತ ಏನೇ ಅಹಿತಕರ ಘಟನೆಗಳು ಸಂಭವಿಸದಂತೆ ಸಾರ್ವಜನಿಕರೆ ಮುತುವರ್ಜಿ ವಹಿಸಿಕೊಳ್ಳುತ್ತಿರುವುದು ಸಂತಸದ ವಿಚಾರ. ಈ ಪ್ರದೇಶಗಳ ಜನರೆಲ್ಲರೂ ಉತ್ತಮ ಬಾಂಧವ್ಯದೊಂದಿಗೆ ಖುಷಿಯಿಂದ ಬದುಕುತ್ತಿದ್ದಾರೆ. ಇಂತಹ ಸೌಹಾರ್ದ ವಾತಾವರಣವನ್ನು ಕೆಡಿಸಲು ಯಾರಿಗೂ ಅವಕಾಶ ಕೊಡಬೇಡಿ ಎಂದು ಹರಿರಾಮ್ ಶಂಕರ್ ಸಲಹೆ ನೀಡಿದರು.
ಗೃಹರಕ್ಷಕ ದಳದ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಮಾತನಾಡಿ, ಕನಸುಗಳನ್ನು ಎಲ್ಲರೂ ಕಾಣುತ್ತಾರೆ. ಆದರೆ ಕಂಡ ಕನಸುಗಳನ್ನು ನನಸಾಗಿಸುವ ಇಚ್ಛಾ ಶಕ್ತಿ ಇರಬೇಕು. ಬೆರಳೆಣಿಕೆಯ ಪೊಲೀಸರಿಂದ ಕೋಟ್ಯಂತರ ಸಂಖ್ಯೆಯ ನಾಗರಿಕರ ರಕ್ಷಣೆ ಹಾಗೂ ಪಾಲನೆ ಹೊಣೆ ಅತ್ಯಂತ ತ್ರಾಸದಾಯಕ. ಇಲಾಖೆಯ ಜನಪರ ಯೋಜನೆಗಳಲ್ಲಿ ಸಾರ್ವಜನಿಕ ಭಾಗೀಧಾರಿಕೆ ಇದ್ದರೆ ಮಾತ್ರ, ಸಮಾಜ ಶಾಂತಿ ಹಾಗೂ ನೆಮ್ಮದಿಯಿಂದ ಇರಲು ಸಾಧ್ಯ. ಹೊಸ ಹೊಸ ಯೋಜನೆಗಳ ಮೂಲಕ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಮುಂದಾಗಿರುವ ಎಸ್‌ಪಿ ಅವರ ಕಾರ್ಯವೈಖರಿ ಅಭಿನಂದನೀಯ ಎಂದರು.
ಕಂಡ್ಲೂರು ಮಸೀದಿಯ ಧರ್ಮಗುರುಗಳಾದ ಮೌಲಾನಾ ಇಲಿಯಾಜ್ ನದ್ವಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಜಯ್ ಪುತ್ರನ್ ಹಾಗೂ ಉಡುಪಿಯ ಜಂಬೊ ಸ್ಟಾರ್ ಸೆಕ್ಯೂರಿಟಿ ಏಜಿನ್ಸಿಯ ವಿಜಯ್ ಫೆರ್ನಾಂಡಿಸ್ ಮಾತಾನಾಡಿದರು. ಕಂಡ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೌಸೀನ್ ಹಸ್ರತ್, ದೃಷ್ಟಿ ಯೋಜನೆ ಅಧ್ಯಕ್ಷ ಫಝಲ್ ಖಾಸೀಂ, ಗ್ರಾಮ ಪಂಚಾಯಿತಿ ಪಿಡಿಒ ರೇಣುಕಾ ಶೆಟ್ಟಿ ಇದ್ದರು.
ದೃಷ್ಟಿ ಯೋಜನೆಯಡಿ ಕರ್ತವ್ಯ ನಿರ್ವಹಿಸಲು ಒಪ್ಪಿರುವ ಕೋಟಾದ ಗಣೇಶ್ ಅವರಿಗೆ ಧ್ವಜ ಹಸ್ತಾಂತರ ಮಾಡುವ ಮೂಲಕ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಹೆಚ್.ಡಿ.ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸರ್ಕಲ್ ಇನ್ಸಪೆಕ್ಟರ್ ಜಯರಾಮ್ ಗೌಡ ಸ್ವಾಗತಿಸಿದರು, ಕಂಡ್ಲೂರು ಠಾಣಾಧಿಕಾರಿ ಭೀಮಾಶಂಕರ್ ವಂದಿಸಿದರು. ಹೆಡ್.ಕಾನ್‌ಸ್ಟೇಬಲ್ ಮಧುಸೂಧನ್ ಉಪ್ಪಿನಕುದ್ರು ನಿರೂಪಿಸಿದರು.