ಕಡಬದಲ್ಲಿ ಮರದ ಬಾಕ್ಸ್ ಒಡೆದು ₹84,800 ಕಳವು: ಪ್ರಕರಣ ದಾಖಲು
ಕಡಬ: ಮನೆಯಲ್ಲಿದ್ದ ಮರದ ಬಾಕ್ಸ್ ಒಡೆದು ₹84,800 ನಗದು ಕಳ್ಳತನ ಮಾಡಿರುವ ಘಟನೆ ಕಡಬ ಅಡ್ಡಗದ್ದೆಯಲ್ಲಿ ನಡೆದಿದೆ.
ಕಡಬ ಗ್ರಾಮದ ನಿವಾಸಿ ತಮನ್ನಾ ಜಬೀನ್ (43) ಅವರು ನೀಡಿದ ದೂರಿನಂತೆ, ಅವರು ತಮ್ಮ ಪತಿ, ಮಕ್ಕಳು ಹಾಗೂ ಇತರ ಕುಟುಂಬ ಸದಸ್ಯರೊಂದಿಗೆ ಕಡಬ ಅಡ್ಡಗದ್ದೆಯಲ್ಲಿರುವ ಪತಿಯ ಮನೆಯಲ್ಲಿ ವಾಸವಾಗಿದ್ದಾರೆ. ಪಿರ್ಯಾದಿದಾರರು ತಮ್ಮ ಕೊಠಡಿಯಲ್ಲಿದ್ದ ಮರದ ಬಾಕ್ಸ್ನಲ್ಲಿ ಹಣವನ್ನು ಸಂಗ್ರಹಿಸಿಟ್ಟಿದ್ದರು.
ಆ.18ರಂದು ಕಾರ್ಯಕ್ರಮವೊಂದರ ನಿಮಿತ್ತ ಪತಿ ಹಾಗೂ ಮಕ್ಕಳೊಂದಿಗೆ ಉಡುಪಿಗೆ ತೆರಳಿದ್ದ ಅವರು ಅದೇ ದಿನ ಮನೆಗೆ ವಾಪಸ್ ಆಗಿದ್ದರು. ಆ.24ರಂದು ಮರದ ಬಾಕ್ಸ್ನಲ್ಲಿಟ್ಟಿದ್ದ ಹಣವನ್ನು ತೆಗೆಯಲು ತೆರಳಿದಾಗ, ಬಾಕ್ಸ್ ಒಡೆದ ಸ್ಥಿತಿಯಲ್ಲಿ ಕಂಡುಬಂದಿದೆ.
ಬಾಕ್ಸ್ ಪರಿಶೀಲಿಸಿದಾಗ ಅದರಲ್ಲಿಟ್ಟಿದ್ದ ₹84,800 ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ತಮನ್ನಾ ಜಬೀನ್ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ. 101/2026, ಕಲಂ 305 BNS-2023ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
