Home Mangalorean News Kannada News ಕಡಲ್ಕೊರೆತ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ

ಕಡಲ್ಕೊರೆತ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ

Spread the love

ಕಡಲ್ಕೊರೆತ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ

ಪಡುಬಿದ್ರಿ: ಕಾಪು ತಾಲ್ಲೂಕಿನ ಕಡಲ್ಕೊರೆತ ಪ್ರದೇಶಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಶುಕ್ರವಾರ ಭೇಟಿ ನೀಡಿದರು.

ಮೂಳೂರು, ಬಡಾ ಉಚ್ಚಿಲ, ಎರ್ಮಾಳು ತೆಂಕ ಪ್ರದೇಶದಲ್ಲಿ ತೀವ್ರ ಕಡಲ್ಕೊರೆತದಿಂದ ಹಾನಿಯಾದ ಸ್ಥಳದಲ್ಲಿ ಸ್ಥಳೀಯರೊಂದಿಗೆ ಚರ್ಚಿಸಿದರು.

ಬಳಿಕ ಮಾತನಾಡಿದ ಅವರು, ‘ಕಾಪು, ಮೂಳೂರು, ಪಡುಬಿದ್ರಿ ಪ್ರದೇಶಗಳಲ್ಲಿ ಕಡಲ್ಕೊರೆತ ಪ್ರದೆಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅತಿಹೆಚ್ಚು ಕಡಲ್ಕೊರತ ಪ್ರದೇಶಗಳಿಗೆ ತುರ್ತಾಗಿ ಕಲ್ಲು ಹಾಕಲು ಜಿಲ್ಲಾಧಿಕಾರಿ ಮುಖಾಂತರ ಅಧಿಕಾರಿಗಳಿಗೆ ಹೇಳಿದ್ದೇನೆ’ ಎಂದರು.

ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಒಳಗಾದವರ ರಕ್ಷಣೆಗಾಗಿ ಎನ್‌ಡಿ ಆರ್‌ಎಫ್ ತಂಡವನ್ನು ಸನ್ನದ್ಧವಾಗಿ ರಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿಯೇ ಜಿಲ್ಲಾಧಿಕಾರಿಗಳು ಕರ್ತವ್ಯದಲ್ಲಿರುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಪ್ರಾಕೃತಿಕ ವಿಕೋಪದಿಂದ ಜೀವ ಹಾನಿಯಾದಲ್ಲಿ ತುರ್ತಾಗಿ ಪರಿಹಾರ ನೀಡಲು ಕ್ರಮವಹಿಸಲಾಗಿದೆ.

‘ಮೂಳೂರು ಹಾಗೂ ಬಡಾ ವ್ಯಾಪ್ತಿಯಲ್ಲಿ ಎಡಿಬಿಯಿಂದ ತಡೆಗೋಡೆ ಕಾಮಗಾರಿ ನಡೆಯಲಿದ್ದು, ಯೋಜನೆಯ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಲಾಗಿದೆ. ಟೆಂಡರ್‌, ಗುತ್ತಿಗೆದಾರರನ್ನು ಕಾಯದೆ ಕಡಲ್ಕೊರೆತ ಉಂಟಾದ ಕಡೆ ತುರ್ತಾಗಿ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ’ ಸಂಸದೆ ಹೇಳಿದರು.

ಶಾಸಕ ಲಾಲಾಜಿ ಅರ್ ಮೆಂಡನ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಶಿಕಾಂತ ಪಡುಬಿದ್ರಿ, ಶಿಲ್ಪಾ ಜಿ.ಸುವರ್ಣ, ಗೀತಾಂಜಲಿ ಸುವರ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನೀತಾ ಗುರುರಾಜ್, ಸದಸ್ಯ ಕೇಶವ ಮೊಯ್ಲಿ, ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ರೂಪೇಶ್, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಉದಯಕುಮಾರ್, ಕಂದಾಯ ಪರಿವೀಕ್ಷಕ ರವಿಶಂಕರ್, ಬಡಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಇಂದಿರಾ ಶೆಟ್ಟಿ, ಪಿಡಿಒ ಕುಶಾಲಿನಿ, ಪ್ರಮುಖರಾದ ಕೆ. ಉದಯಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಕೆ.ಸುರೇಶ್‌ ನಾಯಕ್, ಕುತ್ಯಾರು ನವೀನ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸಂಧ್ಯಾ ರಮೇಶ್, ಕೇಸರಿ ಎಂ. ಉಪಸ್ಥಿತರಿದ್ದರು.


Spread the love

Exit mobile version