ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವಕ್ಕೆ ವಜ್ರ ಮಹೋತ್ಸವದ ಸಂಭ್ರಮ
ಉಡುಪಿ: ಕಡಿಯಾಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ವತಿಯಿಂದ ಆಯೋಜಿಸಲಾಗುತ್ತಿರುವ 60ನೇ ವರ್ಷದ ಶ್ರೀಗಣೇಶೋತ್ಸವ ಹಾಗೂ ವಜ್ರ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಸೆಪ್ಟೆಂಬರ್ 14ರಿಂದ 20ರವರೆಗೆ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಾತ್ಯಾಯಿನಿ ಮಂಟಪದಲ್ಲಿ ಉತ್ಸವ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷರೂ, ಶಾಸಕ ಯಶಪಾಲ್ ಎ. ಸುವರ್ಣ ತಿಳಿಸಿದರು.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.13ರಂದು ಸಂಜೆ 4.30ಕ್ಕೆ ಜೋಡುಕಟ್ಟೆಯಿಂದ ಗಣಪತಿ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದೆ. ಡಾ. ಟಿ.ಎಂ.ಎ. ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.

ವಜ್ರ ಮಹೋತ್ಸವದ ವಿಶೇಷ ಆಕರ್ಷಣೆಯಾಗಿ ಭವ್ಯ ‘ರಾಜ ದರ್ಬಾರ್’ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ. ಈ ವೇದಿಕೆಯಲ್ಲಿ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಏಳು ದಿನಗಳ ಕಾಲ ರಾಜನಂತೆ ವಿರಾಜಮಾನನಾಗಿರುವ ಗಣಪತಿ ಭಕ್ತರಿಗೆ ಅನುಗ್ರಹ ನೀಡಲಿದ್ದಾನೆ. ಉತ್ಸವದ ಮುಂದಿನ ಹಂತಗಳಲ್ಲಿ ಯುವಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ, ಈ ಬಾರಿಯ ಕಾರ್ಯಕ್ರಮಗಳಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಉತ್ಸವದಲ್ಲಿ ಧಾರ್ಮಿಕ ಭಾವನೆ ಮತ್ತು ಭಕ್ತಿಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಸಿನಿಮಾ ಗೀತೆಗಳಿಗೆ ಅವಕಾಶ ಇರುವುದಿಲ್ಲ. ಕಡಿಯಾಳಿಯನ್ನು ಸಂಪರ್ಕಿಸುವ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದ್ದು, ಫ್ಲೆಕ್ಸ್, ಬ್ಯಾನರ್, ಕೇಸರಿ ಧ್ವಜಗಳು, ಬಟ್ಟೆ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ ಎಂದು ಯಶಪಾಲ್ ಸುವರ್ಣ ತಿಳಿಸಿದರು.
ವಜ್ರ ಮಹೋತ್ಸವದ ಅಂಗವಾಗಿ ಸೆ.17ರಂದು ಆಹ್ವಾನಿತ ಕಲಾವಿದರಿಂದ ಕುಣಿತ ಭಜನಾ ಸ್ಪರ್ಧೆ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಸೆ.19ರಂದು ಉಡುಪಿ ನಗರದ 100ಕ್ಕೂ ಅಧಿಕ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಗುರುತಿಸಿ ಗೌರವಿಸಲಾಗುವುದು. ಸೆ.20ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಈ ಬಾರಿಯ ಗಣಪತಿ ವಿಗ್ರಹವನ್ನು ಇಂದಿರಾನಗರದ ಎಂಜಿನಿಯರ್ ಸಂಪತ್ ರಾವ್ ಅವರು ನಿರ್ಮಿಸಿದ್ದು, ಚಿನ್ನದ ಕಿರೀಟ, ಪಾಶಾಂಕುಶ ಸೇರಿದಂತೆ ವಿವಿಧ ಆಭರಣಗಳಿಂದ ಅಲಂಕರಿಸಲಾಗಿದೆ. ಉತ್ಸವಕ್ಕೆ ಆಗಮಿಸುವ ಭಕ್ತರ ವಾಹನಗಳಿಗಾಗಿ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ, ಯು. ಕಮಲಾಬಾಯಿ ಪ್ರೌಢಶಾಲೆ ಹಾಗೂ ಕುಂಜಿಬೆಟ್ಟು ಬಿಜೆಪಿ ಜಿಲ್ಲಾ ಕಚೇರಿ ಬಳಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಉಡುಪಿ ಜಿಲ್ಲೆಯ ಅತಿ ಹಿರಿಯ ಗಣಪತಿ ಸಮಿತಿಗಳಲ್ಲಿ ಒಂದಾಗಿರುವ ಕಡಿಯಾಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯು ಈ ಹಿಂದೆ 50ನೇ ವರ್ಷದ ಸುವರ್ಣ ಮಹೋತ್ಸವವನ್ನು ಸಾಮಾಜಿಕ ಕಾಳಜಿಯೊಂದಿಗೆ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಆಚರಿಸಿತ್ತು. ಇದೀಗ 60ನೇ ವರ್ಷದ ವಜ್ರ ಮಹೋತ್ಸವದ ಸಂದರ್ಭದಲ್ಲಿಯೂ ಹಲವು ಸಾಮಾಜಿಕ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಪ. ವಸಂತ ಭಟ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಗೀತಾ ಶೇಟ್, ವಜ್ರ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್ ಹಾಗೂ ಸತೀಶ್ ಕುಲಾಲ್ ಉಪಸ್ಥಿತರಿದ್ದರು.