ಕನ್ನಡ ವಿರೋಧಿ ರಾಜ್ಯಪಾಲ ಗೆಹ್ಲೋಟ್ ವಜಾಗೊಳಿಸಿ : ಕರವೇ ಜಿಲ್ಲಾಧ್ಯಕ್ಷ ಪ್ರಭಾಕರ್ ಪೂಜಾರಿ ಆಗ್ರಹ
ಹಿಂದಿ ಭಾಷೆ ಹೇರಿಕೆ ಹುನ್ನಾರ ಖಂಡಿಸಿ ಧರಣಿ
ಉಡುಪಿ: ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತಿದ್ದು, ಕರ್ನಾಟಕ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಅವರನ್ನು ರಾಜ್ಯಪಾಲ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಉಡುಪಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ)ಯ ಜಿಲ್ಲಾಧ್ಯಕ್ಷ ಅ.ರಾ. ಪ್ರಭಾಕರ್ ಪೂಜಾರಿ ಆಗ್ರಹಿಸಿದರು.
ರಾಜ್ಯ ಸರ್ಕಾರವು ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಕರವೇ ವತಿಯಿಂದ ಮಂಗಳವಾರ (ಏ.7) ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದರು.
ರಾಜ್ಯಪಾಲರು ಬರೆದಿರುವ ಪತ್ರದ ಹಿಂದೆ ಕರ್ನಾಟಕದಲ್ಲಿ ಶಾಶ್ವತವಾಗಿ ಹಿಂದಿ ಭಾಷೆ ಹೇರಿಕೆ ಮಾಡುವ ಹುನ್ನಾರವಿದೆ. ‘ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ’ ಎಂಬ ಅನಾಮಧೇಯ ಸಂಘಟನೆಯ ಮನವಿಗೆ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅವರು ತಮ್ಮ ಕಾರ್ಯವ್ಯಾಪ್ತಿಯನ್ನೂ ಮೀರಿ ಕನ್ನಡಿಗರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹಿಂದಿ ಮಾಫಿಯಾದವರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ತೋರುತ್ತಿದೆ. ಹೀಗಾಗಿ ಅವರು ಕರ್ನಾಟಕದಲ್ಲಿ ರಾಜ್ಯಪಾಲರಾಗಿ ಉಳಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಅ. ರಾ. ಪ್ರಭಾಕರ್ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ವಿರೋಧಿ ನಿಲುವು ತಾಳಿರುವ ರಾಜ್ಯಪಾಲರನ್ನು ಕೇಂದ್ರ ಸರ್ಕಾರ ವಜಾ ಮಾಡುವಂತೆ ಆಗ್ರಹಿಸಿ ಎಡಿಸಿ ಅಬೀದ್ ಗದ್ಯಾಳ್ ಅವರಿಗೆ ಅ.ರಾ. ಪ್ರಭಾಕರ್ ಪೂಜಾರಿ ಮನವಿ ಸಲ್ಲಿಸಿದರು.
ಜನರಿಂದ ಆಯ್ಕೆಯಾದ ರಾಜ್ಯ ಸರ್ಕಾರವೇ ಕರ್ನಾಟಕದ ಶಿಕ್ಷಣ ನೀತಿ ಕುರಿತು ತೀಮಾರ್ನಿಸುತ್ತದೆ. ಅದನ್ನು ಪ್ರಶ್ನಿಸಲು ರಾಜ್ಯಪಾಲರು ಯಾರು? ಅವರಿಗೆ ಸಂವಿಧಾನ ಈ ಅವಕಾಶ ನೀಡಿಲ್ಲ. ಕೂಡಲೇ ಅವರನ್ನು ರಾಜ್ಯಪಾಲರ ಸ್ಥಾನದಿಂದ ವಜಾ ಮಾಡಬೇಕೆಂಬ ಮನವಿಯನ್ನು ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ನೀಡಲಾಯಿತು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಬಸ್ರುರ್, ಉಪಾಧ್ಯಕ್ಷ ಶಹಾಬುದ್ದೀನ್, ನಗರ ಅಧ್ಯಕ್ಷ ಅಜರುದ್ಧೀನ್, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಪುರುಷೋತ್ತಮ ಪೂಜಾರಿ, ಉಡುಪಿ ಜಿಲ್ಲಾ ಮಹಿಳಾ ಘಟಕದ ಪ್ರಮುಖರಾದ ಅಶ್ವಿನಿ ನಾಯಕ್, ಅನೂಷಾ ಆಚಾರ್, ಗೀತಾ ಪೂಜಾರಿ, ಸುನಂದಾ ಕೋಟ್ಯಾನ್, ಜಿಲ್ಲಾ ಸಂಚಾಲಕ ಕೃಷ್ಣ ಪಾಂಗಾಳ, ಗೋಪಾಲ್ ದೊರೆ, ಅಯ್ಯಪ್ಪ, ಮಹೇಶ್ ಬಿ. ಎಚ್, ರಾಗು ಪೂಜಾರಿ, ಸುಕುಮಾರ್ ಶೆಟ್ಟಿ, ಅಕ್ಷತ್, ಕಾರ್ಕಳ ತಾಲೂಕು ಉಪಾಧ್ಯಕ್ಷ ಮುಬಿನ್ ಮೊದಲಾದವರು ಉಪಸ್ಥಿತರಿದ್ದರು.
