ಕರಾವಳಿಯತ್ತ ಸರ್ಕಾರದ ಚಿತ್ತ: ಸಚಿವ ಸಂಪುಟ ಸಭೆಗೆ ರಮೇಶ್ ಕಾಂಚನ್ ಮೆಚ್ಚುಗೆ
ಉಡುಪಿ: ಕಡಲನಗರಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ಸರ್ಕಾರದ ಆಡಳಿತವನ್ನು ಜನಸಾಮಾನ್ಯರ ಸಮೀಪಕ್ಕೆ ತರುವುದು ಮಹತ್ವದ ಹೆಜ್ಜೆ. ಕರಾವಳಿಯ ಜನರ ಬಹುಕಾಲದ ಬೇಡಿಕೆಗಳಿಗೆ ಸ್ಪಂದಿಸಲು, ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡಲು ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ ಶಿವಕುಮಾರ್ ಅವರು ಈ ನಿರ್ಧಾರ ಮಾಡಿರುವುದು ಬಹಳ ಮಹತ್ವದ್ದು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಕರಾವಳಿ ಪ್ರದೇಶವು ರಾಜ್ಯದ ಆರ್ಥಿಕ, ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ರಾಜಧಾನಿಯನ್ನು ಹೊರತು ಪಡಿಸಿದರೆ ಎರಡನೇ ಅತೀ ದೊಡ್ಡ ಮಹತ್ವದ ಸ್ಥಾನವನ್ನು ಹೊಂದಿದೆ. ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಸಲು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಿರ್ಧಾರ ಮಾಡಿರುವುದು ದಿಟ್ಟ ಮತ್ತು ಮಹತ್ವದ ಹೆಜ್ಜೆಯಾಗಿದೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಸಮುದ್ರ, ಬಂದರು, ಮೀನುಗಾರಿಕೆ, ಕೃಷಿ, ಪ್ರವಾಸೋದ್ಯಮ, ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಅಪಾರ ಸಾಮರ್ಥ್ಯ ಹೊಂದಿವೆ. ಸಚಿವ ಸಂಪುಟ ಸಭೆಯನ್ನು ಕರಾವಳಿಯಲ್ಲೇ ನಡೆಸಿದಾಗ ಸ್ಥಳೀಯ ಸಮಸ್ಯೆಗಳನ್ನು ಸ್ಥಳದಲ್ಲೇ ಅರಿತುಕೊಳ್ಳಲು ಸರ್ಕಾರಕ್ಕೆ ಅವಕಾಶ ದೊರೆಯುತ್ತದೆ. ಚರ್ಚೆಯ ಪ್ರಮುಖ ಅಂಶಗಳು ಅದು ಕರಾವಳಿಯ ಮೂರು ಜಿಲ್ಲೆಗಳಿಗೆ ಸಂಬಂಧಪಟ್ಟಿದ್ದು ಪ್ರಮುಖವಾಗಿರುವುದರಿಂದ ಮಹತ್ವ ಮತ್ತು ಕರಾವಳಿಯ ಅಭಿವೃದ್ಧಿಗೆ ಅವಕಾಶ ಈ ಸಭೆಯಲ್ಲಿ ನೂರಕ್ಕೆ ನೂರು ಸಿಗುತ್ತದೆ.
ಮೂಲಸೌಕರ್ಯದ ಜೊತೆ ಜೊತೆಗೆ ಉದ್ಯೋಗದ ಅಗತ್ಯ, ಮೀನುಗಾರರ ಸಮಸ್ಯೆಗಳು, ಪ್ರವಾಸೋದ್ಯಮದ ಅವಕಾಶಗಳು, ಪರಿಸರಕ್ಕೆ ಮಾರಕವಾಗದ ಕೈಗಾರಿಕಾ ಅಭಿವೃದ್ಧಿಯ ಬಗೆಗೆ ಮಹತ್ವದ ನಿರ್ಣಯಗಳು ಈ ಸಭೆಯಲ್ಲಿ ಧ್ವನಿಯಾಗಲಿದೆ. ಕರಾವಳಿ ಭಾಗದ ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ಅನುದಾನ ಮತ್ತು ಆಡಳಿತಾತ್ಮಕ ಅನುಮೋದನೆಗಳನ್ನು ನೀಡುವ ಅವಕಾಶ ಈ ಸಂಪುಟ ಸಭೆಯಲ್ಲಿ ಸಿಗಲಿದೆ.
ಕರಾವಳಿ ಜನಜೀವನದಲ್ಲಿ ಮೀನುಗಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಮೀನುಗಾರರ ದೋಣಿಗಳು, ಬಂದರುಗಳು, ಜೆಟ್ಟಿ, ಮೀನು ಸಂಸ್ಕರಣಾ ಘಟಕಗಳು, ಶೀತಲೀಕರಣ ವ್ಯವಸ್ಥೆ ಹಾಗೂ ಮಾರುಕಟ್ಟೆ ಸೌಲಭ್ಯಗಳ ಅಭಿವೃದ್ಧಿ ಬಹಳ ಮುಖ್ಯ. ಮೀನುಗಾರಿಕೆ ಬಂದರುಗಳ ಅಭಿವೃದ್ಧಿ, ಮೀನುಗಾರರಿಗೆ ಮೂಲಸೌಕರ್ಯ, ವಿಮೆ, ಡೀಸೆಲ್ ಸಬ್ಸಿಡಿ, ಮೀನು ಸಂಸ್ಕರಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಯೋಜನೆಗಳನ್ನು ರೂಪಿಸಲು ಅವಕಾಶ ಸಿಗಬಹುದು. ಇದರಿಂದ ಮೀನುಗಾರರ ಆದಾಯ ಹೆಚ್ಚಿಸುವ ಹಾಗೂ ಅವರ ಜೀವನಮಟ್ಟ ಸುಧಾರಿಸುವ ಕ್ರಮಗಳಿಗೆ ವೇಗ ಸಿಗುವ ನಿರೀಕ್ಷೆ ಇದೆ.
ಉಡುಪಿ, ಮಂಗಳೂರು, ಉತ್ತರ ಕನ್ನಡ ಸೇರಿದಂತೆ ಕರಾವಳಿ ಪ್ರದೇಶವು ಸುಂದರ ಕಡಲತೀರಗಳು, ದೇವಾಲಯಗಳು, ನದಿಗಳು, ದ್ವೀಪಗಳು, ಪಾರಂಪರಿಕ ಸಂಸ್ಕೃತಿ ಮತ್ತು ಆಹಾರ ಪದ್ಧತಿಗೆ ಪ್ರಸಿದ್ಧವಾಗಿದೆ. ಕರಾವಳಿ ಭಾಗದ ಅನೇಕ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ ಸೇರಿದಂತೆ ಇತರ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಕರಾವಳಿಯ ಪ್ರಮುಖ ಬೇಡಿಕೆಯಾಗಿದ್ದು ಮುಖ್ಯಮಂತ್ರಿಗಳು ಖಂಡಿತ ಈ ಬಗ್ಗೆ ಹಲವು ಪ್ರಮುಖ ನಿರ್ಧಾರ ಕೈಗೊಳ್ಳಲಿದ್ದಾರೆ. ಇದರ ಜೊತೆಗೆ ಕರಾವಳಿ ಪ್ರದೇಶದಲ್ಲಿ ಭತ್ತ, ತೆಂಗು, ಅಡಿಕೆ, ಕಾಳುಮೆಣಸು, ಗೋಡಂಬಿ, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ. ಈ ಬಾರಿ ಮಳೆ ಕ್ಷೀಣಿಸಿದ್ದು ಈ ಬಗ್ಗೆ ಕೂಡ ಚರ್ಚೆಗಳು ನಡೆದು ಪರಿಹಾರ ಸಿಗಲಿದೆ. ನೆರೆ ಮತ್ತು ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ, ಮರಳಿನ ಸಮಸ್ಯೆ ಕೆಂಪುಕಲ್ಲು ಮತ್ತು ಕಲ್ಲು ಗಣಿಗಾರಿಕೆಗೆ ಸಂಬಂಧಪಟ್ಟಂತಹ ನಿರ್ಧಾರಗಳು ಕಾನೂನು ವಿಚಾರಗಳು ಚರ್ಚೆ ಆಗುವ ಸಾಧ್ಯತೆ ಇದ್ದು ಇದೊಂದು ಪ್ರಮುಖ ಹಾಗೂ ಮಹತ್ವದ ಸಚಿವ ಸಂಪುಟ ಸಭೆಯಾಗಲಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಸಂತಸ ವ್ಯಕ್ತಪಡಿಸಿದ್ದಾರೆ .
