ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮೊಗವೀರ ಸಮಾಜಕ್ಕೆ ನೀಡಿ – ಕಿರಣ್ ಕುಮಾರ್ ಉದ್ಯಾವರ
ಉಡುಪಿ: ನಿಗಮ ಮಂಡಳಿ, ಪ್ರಾಧಿಕಾರದ ಅಧ್ಯಕ್ಷರ ನೇಮಕಾತಿ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮೊಗವೀರ ಸಮುದಾಯಕ್ಕೆ ಮೀಸಲಿರಿಸುವಂತೆ ಮಾಜಿ ತಾಲೂಕು ಪಂಚಾಯತ್ ಸದಸ್ಯ ಕಿರಣ್ ಕುಮಾರ್ ಉದ್ಯಾವರ ಮನವಿ ಮಾಡಿದ್ದಾರೆ.
ಮೊಗವೀರ ಸಮಾಜವು ಕರಾವಳಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಹಿಂದಿನಿಂದಲೂ ಮೊಗವೀರ ಸಮಾಜವು ಯಾವುದೇ ಆಸೆ, ಅಧಿಕಾರ, ಪಟ್ಟಕ್ಕಾಗಿ ಬೇಡಿಕೆಯನ್ನಿಡದೆ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸವನ್ನು ಮಾಡುತ್ತಾ ಬಂದಿದೆ. ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಕೂಡಾ ಪಕ್ಷವೇ ಮುಖ್ಯವೆನ್ನುವ ಧ್ಯೇಯದೊಂದಿಗೆ ಪಕ್ಷದ ಪರವಾಗಿ ಸಮಾಜವು ಭದ್ರವಾಗಿ ನಿಂತಿದೆ. ಅಲ್ಲದೆ ಪಕ್ಷವು ಸಮಾಜದ ಆಗುಹೋಗುಗಳಿಗೆ, ನೋವುಗಳಿಗೆ ಸ್ಪಂದಿಸುತ್ತಾ ಬಂದಿರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಇತ್ತೀಚಿನ ದಿನಗಳಲ್ಲಿ ಪಕ್ಷಕ್ಕಾಗಿ ದುಡಿದ ಮೊಗವೀರ ಸಮಾಜದ ಹಿರಿಯ ನಾಯಕರನ್ನು ಗುರುತಿಸುವಲ್ಲಿ ವಿಫಲವಾಗಿದೆ. ಕರಾವಳಿ ಭಾಗದಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯರಾದ ಮಹಾಬಲ ಕುಂದರ್, ಕೇಶವ ಕೋಟ್ಯಾನ್, ದಿವಾಕರ ಕುಂದರ್, ಹಿರಿಯಣ್ಣ ಚಾತ್ರಬೆಟ್ಟು, ಮದನ್ ಕುಮಾರ್, ಚೇತನ್ ಬೆಂಗ್ರೆ ಇವರಲ್ಲಿ ಯಾರಿಗೊಬ್ಬರಿಗಾದರೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡಿದಲ್ಲಿ ಮೊಗವೀರ ಸಮಾಜಕ್ಕೆ ನ್ಯಾಯ ದೊರಕಿದಂತಾಗುತ್ತದೆ ಎಂದು ಕಿರಣ್ ಕುಮಾರ್ ಉದ್ಯಾವರ ತಿಳಿಸಿರುತ್ತಾರೆ.