ಕರೆನ್ಸಿ ಟ್ರೆಡಿಂಗ್ ವಂಚನೆ ಪ್ರಕರಣ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕರೆನ್ಸಿ ಟ್ರೆಡಿಂಗ್ ಮತ್ತು ಷೇರು ವ್ಯವಹಾರ ವಂಚನೆ ಪ್ರಕರಣಗಳಲ್ಲಿ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಆರೋಪಿತನು ಕರೆನ್ಸಿ ಟ್ರೆಡಿಂಗ್ ಹಾಗೂ ಷೇರು ವ್ಯವಹಾರದಲ್ಲಿ ಅಧಿಕ ಲಾಭ ನೀಡುವುದಾಗಿ ನಂಬಿಸಿ ಸುಮಾರು ರೂ.1 ಕೋಟಿ 20 ಲಕ್ಷ ವಂಚನೆ ನಡೆಸಿದ್ದ ಆರೋಪ ಎದುರಿಸುತ್ತಿದ್ದಾನೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2011ನೇ ಸಾಲಿನಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.
ಪೊಲೀಸರ ಮಾಹಿತಿ ಪ್ರಕಾರ, Nano Forex India ಎಂಬ ಸಂಸ್ಥೆಯ ‘ಫಾರೆಕ್ಸ್ ರೋಬೋಟ್ ಸಾಫ್ಟ್ವೇರ್’ ಮೂಲಕ ಕರೆನ್ಸಿ ಟ್ರೆಡಿಂಗ್ ಮತ್ತು ಷೇರು ವ್ಯವಹಾರದಲ್ಲಿ ತಿಂಗಳಿಗೆ 40 ಶೇಕಡಾ ಲಾಭ ಹಾಗೂ 20 ಶೇಕಡಾ ಮರುಪಾವತಿ ನೀಡುವುದಾಗಿ ಭರವಸೆ ನೀಡಲಾಗಿತ್ತು. ಐಡಿ ಕಾರ್ಡ್ ಮತ್ತು ಇತರೆ ದಾಖಲೆಗಳನ್ನು ತೋರಿಸಿ ವಿಶ್ವಾಸ ಹುಟ್ಟಿಸಿ, ಸಾಫ್ಟ್ವೇರ್ ಬಳಕೆ ಮಾಡುವ ಅವಕಾಶ ಕಲ್ಪಿಸುವುದಾಗಿ ಹೇಳಿ ವಿವಿಧ ಗ್ರಾಹಕರಿಂದ ಒಟ್ಟು ರೂ.1.20 ಕೋಟಿ ಹಣ ಸಂಗ್ರಹಿಸಲಾಗಿತ್ತು.
ಆದರೆ ಹಣಕ್ಕೆ ಯಾವುದೇ ಲಾಭ ಅಥವಾ ಮರುಪಾವತಿ ನೀಡದೇ, ಹಣವನ್ನು ದುರುಪಯೋಗಪಡಿಸಿ ವಂಚನೆ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಈ ಪ್ರಕರಣದಲ್ಲಿ ವಾರಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಜಯ್ ಪ್ರಸಾದ್ ಜಿ (41), ವಾಸ: ಉಪ್ಕಾರ್ ಲೇಔಟ್, ವಿಶ್ವನಿಧಂ, ಬೆಂಗಳೂರು ಅವರನ್ನು ಫೆಬ್ರವರಿ 20, 2026ರಂದು ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಬೆಂಗಳೂರಿನಲ್ಲಿ ಬಂಧಿಸಿದೆ.
ಬಂಧಿತನನ್ನು ಮಂಗಳೂರು ನಗರದ ಮಾನ್ಯ 7ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
