ಕರ್ತವ್ಯ ನಿರ್ಲಕ್ಷ್ಯತೆ ತೋರುವ ಗಣತಿದಾರರ ವಿರುದ್ಧ ಶಿಸ್ತು ಕ್ರಮ : ದ.ಕ. ಡಿಸಿ ದರ್ಶನ್
ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯವನ್ನು ನಿರ್ವಹಿಸಲು ದ.ಕ. ಜಿಲ್ಲಾಡಳಿತದಿಂದ ಮಂಗಳೂರು ತಾಲೂಕಿನಲ್ಲಿ 1714 ಗಣತಿದಾರ ರನ್ನು ನೇಮಕ ಮಾಡಲಾಗಿದ್ದು, ಇದುವರೆಗೆ 425 ಗಣತಿದಾರರು ಸಮೀಕ್ಷೆ ಕಾರ್ಯಕ್ಕೆ ಹಾಜರಾಗದೆ ಕರ್ತವ್ಯ ಲೋಪ ತೋರಿಸಿರುವುದನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿದೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಗಣತಿದಾರರು ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಮನೆ ಮನೆ ಸಮೀಕ್ಷೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಈ ಗಣತಿ ಕಾರ್ಯವನ್ನು ಸರ್ಕಾರವು ನಿಗದಿಪಡಿಸಿ ಆದೇಶಿಸಿದಂತೆ ಅಕ್ಕೋಬರ್ 7ರ ಒಳಗಾಗಿ ಮುಕ್ತಾಯ ಗೊಳಿಸಲು ಸರ್ಕಾರದ ನಿರ್ದೇಶನ ವಿರುತ್ತದೆ. ಆದುದರಿಂದ ಸಮೀಕ್ಷೆ ಕಾರ್ಯಕ್ಕೆ ಹಾಜರಾಗದೆ ಕರ್ತವ್ಯ ನಿರ್ಲಕ್ಷ್ಯತೆ ತೋರುವ ಗಣತಿದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಕುರಿತು ಜಿಲ್ಲಾಡಳಿತದ ತೀರ್ಮಾನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಗೈರುಹಾಜರಾಗಿರುವ ಎಲ್ಲಾ ಗಣತಿದಾರರು ಈ ಕೂಡಲೇ ಸಮೀಕ್ಷೆ ಕಾರ್ಯಕ್ಕೆ ಹಾಜರಾಗಬೇಕು. ತಪ್ಪಿದಲ್ಲಿ ಶಿಸ್ತುಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ದರ್ಶನ್.ಎಚ್.ವಿ ಎಚ್ಚರಿಕೆ ನೀಡಿದ್ದಾರೆ.