ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೋಗ್ಲಿಂಗ್ ಸಂಸ್ಮರಣೆ

Spread the love

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೋಗ್ಲಿಂಗ್ ಸಂಸ್ಮರಣೆ

ಮಂಗಳೂರು: “ಆರ್ಥಿಕ ಕುಸಿತ ಕೊರೋನದಿಂದಾಗಿ ಆದುದಲ್ಲ. ಎರಡು ಮೂರು ವರ್ಷಗಳ ಹಿಂದಿನಿಂದ ನೋಟು ಬ್ಯಾನ್ ಹಾಗೂ ಜಿ.ಎಸ್.ಟಿ. ಜಾರಿಯ ಪರಿಣಾಮವಾಗಿ ಅದು ಆರಂಭಗೊಂಡಿತ್ತು. ಕೊರೋನ ಪರಿಣಾಮವಾಗಿ ಆದ ಆರ್ಥಿಕ ನಷ್ಟ ಸಮಸ್ಯೆಯನ್ನು ಬಿಗಡಾಯಿಸಿದೆ. ಪತ್ರಿಕಾ ರಂಗಕ್ಕೆ ಇದರ ಬಿಸಿ ಬಹಳವಾಗಿ ತಟ್ಟಿದ್ದು ಹಲವು ಪತ್ರಕರ್ತರು ಕೆಲಸ ಕಳೆದುಕೊಳ್ಳುವಂತೆ ಹಾಗೂ ಸಂಬಳ ಕಡಿತಗೊಳ್ಳುವಂತೆ ಆಗಿದೆ” ಎಂದು ಅರ್ಥಶಾಸ್ತ್ರಜ್ಞ ಹಾಗೂ ಅಮುಕ್ತ್ ಮಾಜಿ ಅಧ್ಯಕ್ಷ ಪ್ರೊ। ಎ.ಎಂ.ನರಹರಿ ಹೇಳಿದರು.

ಅವರು ಜುಲೈ 1 ರಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಸಮಿತಿ ವತಿಯಿಂದ ಕರ್ನಾಟಕ ಥಿಯೋಲಾಜಿಕಲ್ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ರೆವರೆಂಡ್ ಹರ್ಮನ್ ಮೋಗ್ಲಿಂಗ್ ಸಂಸ್ಕರಣೆ ಕಾರ್ಯಕ್ರಮದಲ್ಲಿ ಪ್ರಸಕ್ತ ಆರ್ಥಿಕ ಸನ್ನಿವೇಶ ಮತ್ತು ಪತ್ರಿಕೆಗಳ ಸವಾಲು ಎಂಬ ವಿಚಾರ ಮಂಡಿಸಿ ಮಾತನಾಡುತ್ತಿದ್ದರು. ಮಂಗಳೂರಿನ ಬಲ್ಮಠದ ಸಹೋದಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದ ಪ್ರಯುಕ್ತ ಮಂಗಳೂರು ಸಮಾಚಾರ ಪತ್ರಿಕೆಯ ಸ್ಥಾಪಕ ಸಂಪಾದಕ ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ರವರು ಮಾಲಾರ್ಪಣೆಗೈದರು. ಬಳಿಕ ಇತರ ಅತಿಥಿಗಳು ಪುಷ್ಪಾರ್ಪಣೆ ಮಾಡಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಬಂಟ್ವಾಳ್ ವಹಿಸಿದ್ದರು.

“ಕನ್ನಡ ಪತ್ರಿಕೋದ್ಯಮದ ಪಿತಾಮಹರಾದ ರೆ.ಹರ್ಮನ್ ಮೋಗ್ಲಿಂಗ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಪತ್ರಿಕಾ ದಿನಾಚರಣೆ ಮಾಡುತ್ತಿರುವುದು ಅರ್ಥಪೂರ್ಣ” ಎಂದು ವಾರ್ತಾಧಿಕಾರಿ ಖಾದರ್ ಶಾ ಶ್ಲಾಘಿಸಿದರು.

ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಎಂ. ವಾಟ್ಸನ್ ” ಕನ್ನಡ ತುಳು ನಿಘಂಟು ಮಾಡಿದ ಕಿಟೆಲ್ ರಿಗೆ ಸಂದಿರುವಷ್ಟು ಗೌರವ ಕನ್ನಡಕ್ಕೆ ಬಹಳಷ್ಟು ಕೊಡುಗೆ ನೀಡಿದ ಮೋಗ್ಲಿಂಗ್ ಅವರಿಗೆ ಸಿಕ್ಕಿಲ್ಲ. ಮಂಗಳೂರು ಪತ್ರಿಕಾ ಭವನಕ್ಕೆ ಹೋಗುವ ರಸ್ತೆಗೆ ಅಥವಾ ಜ್ಯೋತಿ ರಸ್ತೆಗೆ ಅವರ ಹೆಸರು ಇಟ್ಟು ಅವರ ಸ್ಮರಣೆ ಯಾವಾಗಲೂ ಆಗುವಂತೆ ಮಾಡಬೇಕು ” ಎಂದರು.

ವಿ4 ಚಾನೆಲ್ ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್ , ಸ್ಪಿಯರ್ ಹೆಡ್ ಮೀಡಿಯ ಮಾರುಕಟ್ಟೆ ನಿರ್ದೇಶಕ ಕೆನ್ಯೂಟ್ ಜೆ. ಪಿಂಟೊ, ಮಂಗಳೂರಿಯನ್ ಡಾಟ್ ಕಾಂ ಸಂಪಾದಕರಾದ ಶ್ರೀಮತಿ ವಾಯ್ಲೆಟ್ ಪಿರೇರ ರವರು ಪ್ರೊ। ಎ.ಎಂ.ನರಹರಿಯವರು ಮಂಡಿಸಿದ ವಿಚಾರದ ಕುರಿತು ತಮ್ಮ ಪ್ರತಿಕ್ರಿಯೆ ನೀಡಿ ತಮ್ಮ ಅನುಭವ ಮತ್ತು ಸಲಹೆಗಳನ್ನು ನೀಡಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾರನಾಥ ಕಾಪಿಕಾಡ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಈಶ್ವರ ವಾರಣಾಸಿ ವಂದಿಸಿದರು.

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಡು ಕಾರ್ಯಕ್ರಮ ನಡೆಸಲಾಯಿತು.


Spread the love