Home Mangalorean News Kannada News ಕಲ್ಲಡ್ಕ ಭಟ್ಟರ ಶಾಲೆಗೆ ಜನಾರ್ಧನ ರೆಡ್ಡಿ, ಗೆಳೆಯರಿಂದ ರೂ.26 ಲಕ್ಷ ದಾನ

ಕಲ್ಲಡ್ಕ ಭಟ್ಟರ ಶಾಲೆಗೆ ಜನಾರ್ಧನ ರೆಡ್ಡಿ, ಗೆಳೆಯರಿಂದ ರೂ.26 ಲಕ್ಷ ದಾನ

Spread the love

ಕಲ್ಲಡ್ಕ ಭಟ್ಟರ ಶಾಲೆಗೆ ಜನಾರ್ಧನ ರೆಡ್ಡಿ, ಗೆಳೆಯರಿಂದ ರೂ.26 ಲಕ್ಷ ದಾನ

ಮಂಗಳೂರು: ಕಲ್ಲಡ್ಕ ಶಾಲೆಗೆ ಅನ್ನದಾನದ ಅನುದಾನ ಕಡಿತದ ಹಿನ್ನೆಲೆಯಲ್ಲಿ ಶಾಲೆಯ ಹಿತೈಷಿಗಳ ಭಿಕ್ಷಾಂದೇಹಿ ಅಭಿಯಾನಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಸಾಥ್ ನೀಡಿದ್ದಾರೆ.

ಹೌದು. ಕಲ್ಲಡ್ಕದ ಶಾಲೆಗೆ ಭೇಟಿ ನೀಡಿದ ಜನಾರ್ದನ ರೆಡ್ಡಿ 26 ಲಕ್ಷ ರೂಪಾಯಿ ಚೆಕ್ ಅನ್ನು ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಹಸ್ತಾಂತರಿಸಿದ್ದಾರೆ.

ಪ್ರಭಾಕರ ಭಟ್ಟರಿಗೆ ತೊಂದರೆಯಾಗಿರುವುದು ಗೊತ್ತಿದ್ದು, ವಿಚಾರಿಸದೇ ಮನೆಯಲ್ಲಿ ಕೂಡುವುದು ಸಭ್ಯತೆಯಲ್ಲ ಹಾಗಾಗಿ ಅವರನ್ನ ಕಾಣಲು ಬಂದಿದ್ದೇನೆ ಎಂದು ರೆಡ್ಡಿ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಹಾಗೆ ಈ ಶಾಲೆಗೆ ಭೇಟಿ ನೀಡಿ 13 ವರ್ಷಗಳಾಗಿತ್ತು, ಸರ್ಕಾರ ಅನುದಾನ ಕೊಡದಿದ್ದರೂ ಪರವಾಗಿಲ್ಲ,  ಅವರ ಶಾಲೆಯನ್ನ ಉಳಿಸಲು ನಾನು ಮತ್ತು ನನ್ನ ಗೆಳೆಯರು ಸೇರಿ ಶಾಲೆಗೆ 26 ಲಕ್ಷ ನೀಡಿ ಭಿಕ್ಷಾಂದೇಹಿ ಆಂದೋಲನಕ್ಕೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಈ ಆನ್ ಲೈನ್ ಅಭಿಯಾನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಕಲ್ಲಡ್ಕದ ಎರಡು ಶಾಲೆಗಳಿಗೆ ಬರುತ್ತಿದ್ದ ಅನ್ನದಾನದ ಅನುದಾನ ಕಡಿತಗೊಳಿಸಿ ಸರಕಾರ ಆದೇಶಿಸುತ್ತಿದ್ದಂತೆ ಶಾಲೆಯ ಸಂಚಾಲಕ, ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಭಿಕ್ಷೆ ಎತ್ತಿಯಾದರೂ ಶಾಲೆಯನ್ನು ನಡಿಸ್ತೀನಿ ಅನ್ನೋ ಮಾತು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಮಹೇಶ್ ಮತ್ತು ಅವರ ತಂಡ ಸಾಮಾಜಿಕ ಜಾಲತಾಣದ ಮೂಲಕ `ಭಿಕ್ಷಾಂದೇಹಿ’ ಆನ್ ಲೈನ್ ಅಭಿಯಾನ ಆರಂಭಿಸಿತ್ತು. ಇದೀಗ ಅಭಿಯಾನಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಕೂಡಾ ದೇಣಿಗೆ ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಕಲ್ಲಡ್ಕ ಶಾಲೆಗೆ ಆಗಮಿಸಿದ ಜನಾರ್ದನ ರೆಡ್ಡಿ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೂಲಕ 26 ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಈಗಾಗಲೇ ಹಲವು ರಾಜಕೀಯ, ಸಾಮಾಜಿಕ ಮುಖಂಡರು ದೇಣಿಗೆ ನೀಡಿ ಶಾಲೆಗೆ ನೈತಿಕ ಬೆಂಬಲ ನೀಡಿದ್ದಾರೆ.


Spread the love

1 Comment

Comments are closed.

Exit mobile version