ಜುವೆಲ್ಲರಿ ಉದ್ಯಮಿಯ ಅಪಹರಣ ದರೋಡೆ ಪ್ರಕರಣ: ಪೊಲೀಸರಿಂದ ಆರೋಪಿಗಳ ಪತ್ತೆ; ಮುಂದುವರಿದ ವಿಚಾರಣೆ
ಮಂಗಳೂರು: ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿಯಿಂದ ಮಹಾರಾಷ್ಟ್ರ ಮೂಲದ ಜುವೆಲ್ಲರಿ ಉದ್ಯಮಿಯೊಬ್ಬರನ್ನು ಅಪಹರಿಸಿ ದರೋಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಸೋಮವಾರ 5 ಮಂದಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಬಗ್ಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಡಿಸಿಪಿ ಮಿಥುನ್ ಎಚ್.ಎನ್., ಆರೋಪಿಗಳು ಈವರೆಗಿನ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದು, ದೋಚಿದ್ದ ಚಿನ್ನವನ್ನು ಮಾರಾಟ ಮಾಡಿದ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಈ ಜಾಲದ ಹಿಂದೆ ಇನ್ನಷ್ಟು ಮಂದಿ ಇರುವ ಶಂಕೆ ಇದ್ದು, ವಿಚಾರಣೆ ಮುಂದುವರಿದಿದೆ. ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆ ಮುಂದುವರಿಸಲಾ ಗುವುದು ಎಂದರು.
ಆ. 13ರಂದು ಬೆಳಗ್ಗೆ 7ರ ಸುಮಾರಿಗೆ ಕೇರಳದ ಕಾಂಞಗಾಡ್‌ನಿಂದ ಮಂಗಳೂರು ಸೆಂಟ್ರಲ್‌ನಲ್ಲಿ ಬಂದಿಳಿದ ಹರಿಭಾನುದಾಸ ಥೋರಟ್ ಎಂಬವರ ಬಳಿ 350 ಗ್ರಾಂ (ಅಂದಾಜು 35 ಲಕ್ಷ ರೂ. ಮೌಲ್ಯ) ಶುದ್ಧ ಚಿನ್ನದ ಗಟ್ಟಿಯಿತ್ತು. ರೈಲ್ವೇ ನಿಲ್ದಾಣ ಸಮೀಪದ ಹೊಟೇಲ್ ಒಂದರ ಬಳಿ ಆಟೋಗಾಗಿ ಅವರು ಕಾಯುತ್ತಿದ್ದ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಆರು ಮಂದಿ ಅನಾಮಿಕ ವ್ಯಕ್ತಿಗಳು ತಾವು ಕಸ್ಟಮ್ ಅಧಿಕಾರಿಗಳು, ನಿಮ್ಮ ವಿರುದ್ಧ ಮಾಹಿತಿ ಇದ್ದು, ವಿಚಾರಿಸಬೇಕೆಂದು ಹೇಳಿ ದೂರುದಾರರನ್ನು ಬಲವಂತವಾಗಿ ಕಾರಿಗೇರಿಸಿ ಕರೆದೊಯ್ದಿದ್ದರು. ಉಡುಪಿ ಹೈವೇ ಮಾರ್ಗವಾಗಿ ಉ.ಕ. ಜಿಲ್ಲೆ ಕುಮಟಾದ ಶಿರಸಿಗೆ ತಲುಪಿದಾಗ ಕಾರಿನಲ್ಲಿದ್ದ ವ್ಯಕ್ತಿಗಳು ದೂರು ದಾರರ ಬಳಿ ಇದ್ದ ಚಿನ್ನ ಕಸಿದು ಆತನನ್ನು ಇಳಿಸಿ ಪರಾರಿಯಾಗಿದ್ದರು. ಈ ಬಗ್ಗೆ ಅವರು ಕುಮಟಾ ಠಾಣೆಯಲ್ಲಿ ದೂರು ನೀಡಿದ್ದು, ಝೀರೋ ಎಫ್‌ಐಆರ್ ಅಡಿ ಪ್ರಕರಣ ದಾಖಲಿಸಿ ಸರಹದ್ದಿನ ಆಧಾರದ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿತ್ತು. ಅದರಂತೆ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಆಯುಕ್ತರ ನಿರ್ದೇಶನದ ಮೇರೆಗೆ ಸಿಸಿ ಮತ್ತು ಕೇಂದ್ರ ಉಪ ವಿಭಾಗದ ತಂಡದ ರಚಿಸಿ ತಾಂತ್ರಿಕ ಸಾಕ್ಷ್ಯಾಧಾರ ಗಳು ಮತ್ತು ಇತರ ಮಾಹಿತಿಗಳಿಂದ ಐದು ಮಂದಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.
ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಯುವ ಅಗತ್ಯವಿರುವ ಹಿನ್ನೆಲೆಯಲ್ಲಿ ಸದ್ಯ ಆರೋಪಿಗಳ ಹೆಸರು ಮತ್ತು ಇತರ ಮಾಹಿತಿಯನ್ನು ಬಹಿರಂಗಪಡಿಸಲಾಗುತ್ತಿಲ್ಲ ಎಂದು ಅವರು ಹೇಳಿದರು.