ಕಾಂಗ್ರೆಸ್ ಸೇರ್ಪಡೆ ಇನ್ನೂ ನಿರ್ಧಾರವಾಗಿಲ್ಲ, 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ: ರಘುಪತಿ ಭಟ್
**ಮಂಗಳೂರು: ಕಾಂಗ್ರೆಸ್ ಸೇರ್ಪಡೆ ಕುರಿತು ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಈಗಾಗಲೇ ಆಹ್ವಾನ ಬಂದಿರುವುದು ನಿಜ. ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯ ಪಡೆದುಕೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಬಿಜೆಪಿ ಕಡೆಯಿಂದಲೂ ಕರೆಯುವ ನಿರೀಕ್ಷೆಯಲ್ಲಿದ್ದೇನೆ. ಬಿಜೆಪಿ ಆಹ್ವಾನ ನೀಡಿದರೆ ಅದರ ಬಗ್ಗೆಯೂ ಯೋಚಿಸಬಹುದು ಎಂದು ಹೇಳಿದರು.
ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಬೆಳೆದು, ಬಿಜೆಪಿಯಲ್ಲಿ ಯುವ ಮೋರ್ಚಾ ಜಿಲ್ಲಾ ಘಟಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಮೂರು ಬಾರಿ ಶಾಸಕನಾಗಿಯೂ ಆಯ್ಕೆಯಾಗಿದ್ದೇನೆ. ಹೀಗಿರುವಾಗ ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ನನ್ನ ಮನಸ್ಸಿಗೂ ಅದು ಒಪ್ಪುವುದಿಲ್ಲ. ಬೆಂಬಲಿಗರ ವಿಶ್ವಾಸ ಪಡೆದುಕೊಂಡೇ ಯಾವುದೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ರಘುಪತಿ ಭಟ್ ಸ್ಪಷ್ಟಪಡಿಸಿದರು.
ಕಳೆದ ಚುನಾವಣೆಯ ಸಂದರ್ಭದಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ತಪ್ಪಿದ್ದರಿಂದ ನೋವಾಗಿದೆ. ಬಳಿಕ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡುವುದಾಗಿ ಹೇಳಿ, ಕೊನೆಗೆ ಅವಕಾಶ ನೀಡದೆ ವಂಚಿಸಲಾಗಿದೆ ಎಂಬ ಭಾವನೆ ಇದೆ ಎಂದು ತಿಳಿಸಿದರು.
ತಮ್ಮದೇ ಪಕ್ಷದ ಕೆಲವು ಶಾಸಕರಿಂದ ವೈಯಕ್ತಿಕ ದಬ್ಬಾಳಿಕೆ ಎದುರಿಸಬೇಕಾಯಿತು ಎಂದು ಆರೋಪಿಸಿದ ಅವರು, ಈ ಸಂದರ್ಭದಲ್ಲಿಯೂ ಸಂಘದ ಹಿರಿಯರು ಹಾಗೂ ಬಿಜೆಪಿ ನಾಯಕರು ಯಾರೂ ತಮ್ಮೊಂದಿಗೆ ಮಾತನಾಡದೆ ಇದ್ದದ್ದು ಮನಸ್ಸಿಗೆ ನೋವುಂಟು ಮಾಡಿದೆ ಎಂದರು.
ಇತರ ಕ್ಷೇತ್ರಗಳ ಮಾಜಿ ಶಾಸಕರನ್ನು ಗೌರವದಿಂದ ನಡೆಸಿಕೊಳ್ಳಲಾಗುತ್ತದೆ. ತಮಗೆ ವಿಶೇಷ ಗೌರವದ ಅಗತ್ಯವಿಲ್ಲ; ಕನಿಷ್ಠ ಗೌರವದಿಂದ ಮಾತನಾಡಿದ್ದರೂ ಸಾಕಾಗಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
2028ರ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರಕ್ಕೆ ತಮ್ಮ ಹಿಂದಿನ ರಾಜಕೀಯ ಅನುಭವಗಳು ಹಾಗೂ ಬೆಂಬಲಿಗರ ಒತ್ತಾಯವೂ ಕಾರಣವಾಗಿದೆ ಎಂದು ತಿಳಿಸಿದ ರಘುಪತಿ ಭಟ್, ಕ್ಷೇತ್ರದ ಜನರು ತಮ್ಮನ್ನು ಸೋಲಿಸಿಲ್ಲ. ಪಕ್ಷವೇ ಟಿಕೆಟ್ ತಪ್ಪಿಸಿದೆ ಎಂಬ ಅಭಿಪ್ರಾಯವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದರು.
ಜನರು ಸ್ಪರ್ಧಿಸಬೇಡಿ, ಮನೆಯಲ್ಲೇ ಇರಿ ಎಂದು ಹೇಳಿದರೆ ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ. ಚುನಾವಣಾ ರಾಜಕೀಯ ಬಿಟ್ಟರೂ ಜನರಿಗೆ ಸಹಾಯ ಮಾಡಲು ಜನಪ್ರತಿನಿಧಿಯಾಗಿಯೇ ಇರಬೇಕೆಂದಿಲ್ಲ. ಜನರ ಕೆಲಸ ಮಾಡಲು ಬೇರೆ ಮಾರ್ಗಗಳೂ ಇವೆ ಎಂದು ರಘುಪತಿ ಭಟ್ ತಿಳಿಸಿದರು.
