Home Mangalorean News Kannada News ಕಾನೂನು ಸಲಹಾ ಕೇಂದ್ರ – ಉದ್ಘಾಟನೆ

ಕಾನೂನು ಸಲಹಾ ಕೇಂದ್ರ – ಉದ್ಘಾಟನೆ

Spread the love

ಕಾನೂನು ಸಲಹಾ ಕೇಂದ್ರ – ಉದ್ಘಾಟನೆ
ಮಂಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ಮಂಗಳೂರು ಗ್ರಾಮಾಂತರ ಮತ್ತು ಮಂಗಳೂರು ವಕೀಲರ ಸಂಘ(ರಿ) ಮಂಗಳೂರು ಇವರ ಸಹಯೋಗದೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಮೂಡುಶೆಡ್ಡೆ ಇಲ್ಲಿ ಆಗಸ್ಟ್ 16 ರಂದು ಕಾನೂನು ಸಲಹಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದಂತಹ  ಕಡ್ಲೂರ್ ಸತ್ಯನಾರಾಯಣಾಚಾರ್ಯ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಮಾತನಾಡುತ್ತಾ, ಇಂದು ನಮ್ಮ ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿದೆ. ಕೌಟುಂಬಿಕ ದೌರ್ಜನ್ಯಗಳು ನಡೆಯದಂತೆ ತಡೆಯುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕುಟುಂಬ ಸದಸ್ಯರ ನಡುವೆ ಪ್ರೀತಿ ವಿಶ್ವಾಸ ಹೊಂದಾಣಿಕೆಯ ಮನೋಭಾವ ಕಡಿಮೆಯಾಗುತ್ತಿದ್ದು, ಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿ, ಕಾನೂನಿನ ಅರಿವನ್ನು ಮೂಡಿಸಿ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ  ಉಪನಿರ್ದೇಶಕರು ಮಹಿಳಾ ಮತ್ತು ಅಭಿವೃದ್ಧಿ ಇಲಾಖೆಯ ಸುಂದರ ಪೂಜಾರಿ ಮಾತನಾಡುತ್ತಾ ಈ ಕಾನೂನು ಸಲಹಾ ಕೇಂದ್ರ ಜಿಲ್ಲೆಯಲ್ಲಿ ಪ್ರಥಮವಾಗಿ ಆರಂಭವಾಗಿದ್ದು, ಇದು ಕಾನೂನಿನ ಪರಿಮಿತಿಯೊಳಗೆ ಬಂದಂತಹ ನೊಂದ ಮಹಿಳೆಯರಿಗೆ ಕಾನೂನಿನ ನೆರವು ಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಆರ್. ಬಲ್ಲಾಳ್ ಮಂಗಳೂರು ವಕೀಲರ ಸಂಘ(ರಿ) ಮಂಗಳೂರು ಇವರ ಕಾನೂನು ಸಲಹಾ ಕೇಂದ್ರದಲ್ಲಿ ಸಲಹೆಗಳನ್ನು ಒಂದು ದಿನಕ್ಕೆ ಮೀಸಲಿಡದೆ ಮಹಿಳೆಯರಿಗೆ ಆರೋಗ್ಯದ ಬಗ್ಗೆ ತಜ್ಞ ವೈದ್ಯರ ಸಲಹೆ, ಪೋಲೀಸ್ ಅಧಿಕಾರಿ, ಜೊತೆ ನ್ಯಾಯಾಧೀಶರು ಬಂದು ವಾರದಲ್ಲಿ 6 ದಿನ ಕೂಡಾ ಇದ್ದು ಸಾಂತ್ವನವನ್ನು ನೀಡುವ ಕೇಂದ್ರವಾಗಿ ಪರಿಣಮಿಸಬೇಕು ಎಂದು ನುಡಿದರು. ಕಾನೂನು ಸಲಹಾ ಕೇಂದ್ರದ ಕಾನೂನು ಸಲಹೆಗಾರರಾದ ಲೋಕೇಶ ಎಂ.ಜೆ., ನ್ಯಾಯವಾದಿಗಳು ಮತ್ತು ಕಾನೂನು ಸಲಹೆಗಾರರು, ಮಂಗಳೂರು ವಕೀಲರ ಸಂಘ(ರಿ), ಮಂಗಳೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಕು.ಶ್ಯಾಮಲಾ ಸಿ.ಕೆ. ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾನೂನು ಸಲಹೆಯನ್ನು ಅರಸಿ ಬರುವ ಮಹಿಳೆಯರ ಮಾತುಗಳನ್ನು ತಾಳ್ಮೆಯಿಂದ ಆಲಿಸುವುದರಿಂದ ಮಾತ್ರ ಅವರ ನಿಜವಾದ ಸಮಸ್ಯೆಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈ ವರೆಗೆ ನಾವು ಅಂತಹ ಹಲವಾರು ಮಹಿಳೆಯರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇವೆ ಎಂದರು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು. ಭಾರತಿ ಕೆ. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇವರು ವಂದಿಸಿದರು.

Spread the love

Exit mobile version