Home Mangalorean News Kannada News ಕಾರ್ ಸ್ಟ್ರೀಟ್ ಕಾಲೇಜಿನ ಬಂಗಾಲಿ ವಿದ್ಯಾರ್ಥಿಗಳಿಗೆ ವಿಮಾನ ಯಾನದ ಭಾಗ್ಯ

ಕಾರ್ ಸ್ಟ್ರೀಟ್ ಕಾಲೇಜಿನ ಬಂಗಾಲಿ ವಿದ್ಯಾರ್ಥಿಗಳಿಗೆ ವಿಮಾನ ಯಾನದ ಭಾಗ್ಯ

Spread the love

ಕಾರ್ ಸ್ಟ್ರೀಟ್ ಕಾಲೇಜಿನ ಬಂಗಾಲಿ ವಿದ್ಯಾರ್ಥಿಗಳಿಗೆ ವಿಮಾನ ಯಾನದ ಭಾಗ್ಯ

ಮಂಗಳೂರು : ಡಾ.ಪಿ.ದಯಾನಂದ ಪೈ-ಪಿ.ಸತೀಶ ಪೈ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಎಸ್.ಡಬ್ಲ್ಯೂ ಪದವಿ ವ್ಯಾಸಂಗ ಮಾಡುತ್ತಿರುವ, ಮೂಲತಃ ಪಶ್ಚಿಮ ಬಂಗಾಳದ ಸಿಲಿಗುರಿ ಜಿಲ್ಲೆಯ ಹತ್ತು ವಿದ್ಯಾರ್ಥಿಗಳು ಸುರಕ್ಷಿತವಾಗಿ ವಿಮಾನ ಯಾನದ ಮೂಲಕ ತಮ್ಮ ಹುಟ್ಟೂರಿಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೋವಿಡ್-19 ಬಿಕ್ಕಟ್ಟು ಹಾಗೂ ರಾಷ್ಟ್ರವ್ಯಾಪ್ತಿ ಬೀಗ ಮುದ್ರೆಯಿಂದಾಗಿ, ಮಂಗಳೂರಿನ ರಥಬೀದಿಯ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪಶ್ಚಿಮ ಬಂಗಾಳದ ನಿವಾಸಿಗಳಾದ ಹತ್ತು ಜನ ವಿದ್ಯಾರ್ಥಿಗಳು ತಮ್ಮ ಗ್ರಾಮಗಳಿಗೆ ಹಿಂತಿರುಗಲು ಸಾಧ್ಯವಾಗದೆ ಸಿಕ್ಕಿ ಹಾಕಿಕೊಂಡಿದ್ದರು.

ಕೊರೋನಾ ಸಂಕಷ್ಟದ ಸನ್ನಿವೇಶಗಳಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಅವರು, ಉಪನ್ಯಾಸಕರ ಹಾಗೂ ಸ್ಥಳೀಯ ದಾನಿಗಳ ನೆರವಿನಿಂದ ಈ ವಿದ್ಯಾರ್ಥಿಗಳ ಪೋಷಣೆಗೆ ಬೆಂಬಲವಾಗಿ ನಿಂತರು. ಲಾಕ್ಡೌನ್ ಸಂದರ್ಭದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ನ, ವಸತಿ ಹಾಗೂ ಇನ್ನಿತರ ಮೂಲಭೂತ ಸೌಕರ್ಯವನ್ನು ಒದಗಿಸಿದ ಪ್ರಾಂಶುಪಾಲರು, ಈ ವಿದ್ಯಾರ್ಥಿಗಳಿಗೆ ಧ್ಯೆರ್ಯ ತುಂಬಿ ಮಾನಸಿಕವಾಗಿಯೂ ಸಾಂತ್ವನ ನೀಡಿದರು.

ವಿದ್ಯಾರ್ಥಿಗಳ ಪೋಷಕ ತಾರಕ್ ಅವರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರ ಹುಟ್ಟೂರಿಗೆ ಮರಳಿಸುವ ಕೈಂಕರ್ಯಕ್ಕೆ ಏರ್ ಏಷ್ಯಾ ವಿಮಾನದ ಅಧಿಕಾರಿಗಳನ್ನು ಸಂಪರ್ಕಿಸಿ, ರಿಯಾಯಿತಿ ದರದಲ್ಲಿ ವಿಮಾನದ ಟಿಕೇಟ್ಗಳನ್ನು ಕಾಯ್ದಿರಿಸಿದರು. ವಿಮಾನಯಾನದ ವೆಚ್ಚದ ಶೇಕಡಾ 50 ರಷ್ಟು ಏರ್ ಏಷ್ಯಾ, ಶೇ.25 ರಷ್ಟು ಪ್ರಾಂಶುಪಾಲರು ಹಾಗೂ ಶೇ. 25 ರಷ್ಟು ಅಲ್ಲಿನ ಎನ್.ಜಿ.ಒ ದಿಂದ ಭರಿಸಲಾಯಿತು. ಹೀಗೆ ಎಲ್ಲಾ ಪಶ್ಚಿಮ ಬಂಗಾಳದ ವಿದ್ಯಾರ್ಥಿಗಳನ್ನು ಜೂನ್ 19 ರಂದು ಸುರಕ್ಷಿತವಾಗಿ ತಮ್ಮ ಗ್ರಾಮ ಸಿಲಿಗುರಿಗೆ ಕಳುಹಿಸಿಕೊಟ್ಟು ಸಂಕಷ್ಟಕ್ಕೆ ಸ್ಪಂದಿಸಿ ತಮ್ಮ ಕರ್ತವ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ.

ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಮಂಗಳೂರಿನಿಂದ ಬೆಂಗಳೂರಿಗೆ ತೆರೆಳಲು ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟರು. ವಿದ್ಯಾರ್ಥಿಗಳಿಗೆ ಪ್ರಯಾಣದ ವೇಳೆಯಲ್ಲಿ ಅವಶ್ಯವಿರುವ ಎಲ್ಲಾ ವೈದ್ಯಕೀಯ ಸುರಕ್ಷತಾ ಮುನ್ನೆಚ್ಚರಿಕೆಯ ತಪಾಸಣಾ ಹಾಗೂ ಪ್ರಮಾಣ ಪತ್ರ ಪಡೆಯುವ ಜವಬ್ದಾರಿಯನ್ನು ಕಾಲೇಜಿನ ಸಿಬ್ಬಂದಿ ನಾಗೇಂದ್ರ ಆಚಾರ್ಯ ವಹಿಸಿದ್ದರು.


Spread the love

Exit mobile version