ಕಿಲಿಮಂಜಾರೋ ನಂತರ ಕೀನ್ಯಾ ಪರ್ವತಾರೋಹಣ ಮಾಡಿದ ಮಂಗಳೂರಿನ ಆಯಾನ್ ಮೆಂಡನ್
ಮಂಗಳೂರು ಮೂಲದ ದುಬೈನಲ್ಲಿ ನೆಲೆಸಿರುವ ಕುಟುಂಬದ ಕುಡಿ, 11ರ ಹರೆಯದ ಪೋರ ಪರ್ವತಾರೋಹಣದಲ್ಲಿ ಜಗತ್ತಿನ ಗಮನ ಸೆಳೆದಿದ್ದಾನೆ. ತನ್ನ ಎಂಟನೇ ವಯಸ್ಸಿನಲ್ಲಿ ಆಫ್ರಿಕಾದ ಅತಿ ಎತ್ತರದ ಪರ್ವತ ತಾಂಜಾನಿಯಾದ ಕಿಲಿಮಂಜಾರೋ ಹತ್ತಿ ದಾಖಲೆ ಮಾಡಿದ್ದ ಅಯಾನ್ ಮೆಂಡನ್, ಇದೀಗ ಜಗತ್ತಿನ ಮೂರನೇ ಅತಿ ಎತ್ತರದ ಕೆನ್ಯಾದಲ್ಲಿರುವ ಮೌಂಟ್ ಕೆನ್ಯಾ ಪರ್ವತವನ್ನು ಏರುವ ಮೂಲಕ ಸಾಧನೆ ಮಾಡಿದ್ದಾನೆ.

ಮಂಗಳೂರಿನ ಅತ್ತಾವರ ಮೂಲದ ವಾಣಿ ಮೆಂಡನ್ ಎಂಬವರ ಪುತ್ರನಾಗಿರುವ ಅಯಾನ್ ಮೆಂಡನ್ ತನ್ನ 6ನೇ ವಯಸ್ಸಿನಲ್ಲೇ ಪರ್ವತಾರೋಹಣ ಆರಂಭಿಸಿದ್ದಾನೆ. ತನ್ನ ಎಂಟನೇ ವಯಸ್ಸಿನಲ್ಲಿ ಆಫ್ರಿಕಾದ ಎತಿ ಎತ್ತರದ ಪರ್ವತ ಕಿಲಿಮಂಜಾರೋವನ್ನು 2022ರ ಆಗಸ್ಟ್ 4ರಂದು ಏರಿದ್ದು, ಈ ಸಾಧನೆ ಮಾಡಿದ ಜಗತ್ತಿನ ಅತಿ ಕಿರಿಯ ಎಂಬ ಹೆಗ್ಗಳಿಕೆ ಗಳಿಸಿದ್ದಾನೆ.
ತನ್ನ 9ನೇ ವಯಸ್ಸಿನಲ್ಲಿ ಅಮೆರಿಕದ ಅತಿ ಎತ್ತರದ ಪರ್ವತ ಅಕಾಂಕಾಗುವಾ ಏರಿದ್ದು, ಇದನ್ನೂ ಅತಿ ಕಿರಿಯ ವಯಸ್ಸಿನಲ್ಲಿ ಏರಿದ ಬಾಲಕನೆಂಬ ಕೀರ್ತಿಗೆ ಪಾತ್ರವಾಗಿದ್ದಾನೆ. ಇದೀಗ 11ನೇ ವಯಸ್ಸಿನಲ್ಲಿ 2025ರ ಡಿ.30ರಂದು ಮೌಂಟ್ ಕೆನ್ಯಾ ಪರ್ವತವನ್ನು ಏರುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾನೆ.
ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್, ಮೌಂಟ್ ಎಲ್ ಬ್ರಸ್, ಅನ್ನಪೂರ್ಣ ಬೇಸ್ ಕ್ಯಾಂಪ್ ಸೇರಿದಂತೆ ಈಗಾಗಲೇ ಜಗತ್ತಿನ ಎತ್ತರದ ಶಿಖರಗಳನ್ನು ಅಯಾನ್ ಮೆಂಡನ್ ಏರಿದ್ದಾನೆ. ಆಮೂಲಕ ಸಾಮಾನ್ಯ ಜನರು ಊಹಿಸುವುದಕ್ಕೂ ಸಾಧ್ಯವಾಗದ ಎತ್ತರಗಳನ್ನು ತನ್ನ ಸಣ್ಣ ವಯಸ್ಸಿನಲ್ಲೇ ಏರುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾನೆ. ಇದಕ್ಕಾಗಿ ಹೆತ್ತವರ ನಿರಂತರ ಬೆಂಬಲದೊಂದಿಗೆ ನುರಿತ ತಜ್ಞರಿಂದ ಅವಿರತ ತರಬೇತಿಯನ್ನೂ ಪಡೆಯುತ್ತಿದ್ದಾನೆ.