Home Mangalorean News Kannada News ಕುಂದಾಪುರ ತಾಲೂಕು ಆಸ್ಪತ್ರೆ ಅವ್ಯವಸ್ಥೆ ವಿರುದ್ದ ಸಂಘಟನೆಗಳಿಂದ ಪ್ರತಿಭಟನೆ

ಕುಂದಾಪುರ ತಾಲೂಕು ಆಸ್ಪತ್ರೆ ಅವ್ಯವಸ್ಥೆ ವಿರುದ್ದ ಸಂಘಟನೆಗಳಿಂದ ಪ್ರತಿಭಟನೆ

Spread the love

ಕುಂದಾಪುರ ತಾಲೂಕು ಆಸ್ಪತ್ರೆ ಅವ್ಯವಸ್ಥೆ ವಿರುದ್ದ ಸಂಘಟನೆಗಳಿಂದ ಪ್ರತಿಭಟನೆ

ಕುಂದಾಪುರ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನಿರಾಕರಣೆ ಹಾಗೂ ಆಸ್ಪತ್ರೆಯ ಅವ್ಯವಸ್ಥೆಯ ಕುರಿತು ಇಂದು ಉಡುಪಿ ಜಿಲ್ಲಾ ಕಾರ್ಮಿಕ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಸರ್ವಸಂಘ ಮರಳು ಹೋರಾಟ ಸಮಿತಿಯ ಕಾರ್ಯಕರ್ತರು ಆಸ್ಪತ್ರೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

 ಬೆಳಿಗ್ಗೆ ಚಿಕಿತ್ಸೆಗೆಂದು ಬಂದ ವೃದ್ದ ದಂಪತಿಗಳಿಗೆ ಚಿಕಿತ್ಸೆ ನೀಡದೇ ಮಧ್ಯಾಹ್ನದವರೆಗೆ ಕಾಯಿಸಲಾಗಿದ್ದು, ರೋಗಿಗಳಿಂದ ಸಂಘಟನೆಗಳಿಗೆ ದೂರು ಬಂದ ಮೇರೆಗೆ ತಾಲೂಕು ಆಸ್ಪತ್ರೆಯ ದೂರವಾಣಿಗೆ ಸಂಘಟನೆಯ ಪ್ರಮುಖರು ಕರೆ ಮಾಡಿದರೆ ಸ್ವೀಕರಿಸಿಲ್ಲ. ಹತ್ತು ಬಾರಿ ಪ್ರಯತ್ನಿಸಿದಾಗ ಸಿಬ್ಬಂದಿಗಳು ಕರೆ ಸ್ವೀಕರಿಸಿ ಸರ್ಜನ್ ಆಸ್ಪತ್ರೆಯಲ್ಲಿ ಇಲ್ಲ ಎಂದು ಹೇಳಿದ್ದರು. ಸರ್ಜನ್ ಮೊಬೈಲ್ ನಂಬರ್ ಕೇಳಿದರೂ ತಮ್ಮ ಬಳಿ ಇಲ್ಲ ಎಂದು ಉದ್ದಟತನ ತೋರ್ಪಡಿಸಿದ್ದಾರೆಂದು ಆರೋಪಿಸಿ ಹಲವು ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಘಟನೆ ನಡೆಯಿತು.

ಕಳೆದ ದಿನಗಳ ಹಿಂದೆ ಸಹೋದರ ಸಂಬಂಧಿಗಳಿಂದಲೇ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದ ರೋಗಿಯೊಬ್ಬರಿಗೆ ಕಾಲಿಗೆ ಬ್ಯಾಂಡೆಡ್ ಹಾಕಿ ಅಸಹಾಯಕ ಸ್ಥಿತಿಯಲ್ಲಿ ಮಲಗಿಸಲಾಗಿತ್ತು. ಇದನ್ನು ಗಮನಿಸಿ ಪ್ರತಿಭಟನಾಕಾರರು ವೈದ್ಯರ ವಿರುದ್ದ ಧಿಕ್ಕಾರ ಕೂಗಿದರು. ಆಸ್ಪತ್ರೆಯ ಸರ್ಜನ್ ತಕ್ಷಣ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕಾಗಮಿಸಿದ ಆಸ್ಪತ್ರೆಯ ಸರ್ಜನ್ ಉದಯ್ ಶಂಕರ್ ಅವರನ್ನು ಪ್ರತಿಭಟನಕಾರರು ಮನಬಂದಂತೆ ಬೈದು ತರಾಟೆಗೆ ತೆಗೆದುಕೊಂಡರು. ತಕ್ಷಣ ಸ್ಥಳಕ್ಕಾಗಮಿಸಿ ಪೋಲೀಸರು ಪ್ರತಿಭಟನಾಕಾರರನ್ನು ಹೊರಗೆ ಕರೆತಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ, ಕರಾವೇ ಜಿಲ್ಲಾಧ್ಯಕ್ಷ ಅನ್ಸರ್ ಅಹ್ಮದ್, ನಾಗೇಂದ್ರ, ರಾಘವೇಂದ್ರ, ಚಂದ್ರ ಪೂಜಾರಿ, ಶಾಹಿಲ್, ಸುಹೈಲ್, ಇರ್ಫಾನ್ ಭಾಗವಹಿಸಿದ್ದರು.

 


Spread the love

Exit mobile version