ಕುಂದಾಪುರ| ನಂಬಿಸಿ ಹಣ ಪಡೆದು ಮೋಸ: ಪೊಲೀಸ್ ಠಾಣಾ ಮೆಟ್ಟಿಲೇರಿದ ವೃದ್ದ ಮಹಿಳೆ!
ಕುಂದಾಪುರ: ಹರ್ಬಲ್ ಲೈಫ್ ನ್ಯೂಟ್ರಿಷನ್ ಕಂಪೆನಿಯ ಉತ್ಪನ್ನಗಳ ಮಾರಾಟಗಾರ್ತಿ ವೃದ್ದ ಮಹಿಳೆಯೋರ್ವರಿಗೆ ಪರಿಚಯಸ್ಥನಾದ ವ್ಯಕ್ತಿಯೊಬ್ಬ ಹಣಕಾಸು ಮೋಸ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಬೀಜಾಡಿ ಗ್ರಾಮದ ನಿವಾಸಿಯಾದ ತೆರೆಸಾ ಮೆಂಡೊನ್ಸಾ (60) ಎಂಬ ಮಹಿಳೆಗೆ ಅವರ ಪರಿಚಯಸ್ಥ ಬಿದ್ಕಲಕಟ್ಟೆ, ಕುಂದಾಪುರದ ಸಂತೋಷ (50) ಎಂಬಾತ, ಸುಮಾರು ಮೂರು ವರ್ಷಗಳ ಹಿಂದೆ ಕೃಷಿ ತೋಟದ ವೆಚ್ಚಕ್ಕಾಗಿ ಹಣ ನೀಡಿದರೆ ಹೆಚ್ಚು ಮೊತ್ತದಲ್ಲಿ ಹಿಂತಿರುಗಿಸುವುದಾಗಿ ಭರವಸೆ ನೀಡಿದ್ದ. ಆರೋಪಿಯ ಮಾತು ನಂಬಿದ ಮಹಿಳೆ ಹಂತ ಹಂತವಾಗಿ ₹5,000, ₹10,000, ₹50,000, ₹90,000 ಹೀಗೆ ಒಟ್ಟು ₹4,50,000 ರೂಪಾಯಿ ನೀಡಿದ್ದಾಳೆ. ಅಷ್ಟೇ ಅಲ್ಲದೆ, ಆರೋಪಿಯು ಮಹಿಳೆಯಿಂದ ಚಿನ್ನದ ಸರವನ್ನೂ ಪಡೆದು ಬ್ಯಾಂಕಿನಲ್ಲಿ ಅಡವಿಟ್ಟು ಅದರಿಂದ ಹಣವನ್ನು ಪಡೆದಿದ್ದಾನೆ.
ಸುಮಾರು ಮೂರು ತಿಂಗಳ ಹಿಂದೆ ಮಹಿಳೆ ಚಿನ್ನದ ಸಾಲದ ಬಡ್ಡಿ ಪಾವತಿಸಲು ಹಣದ ಅಗತ್ಯವಿದ್ದಾಗ ಆರೋಪಿಯನ್ನು ಸಂಪರ್ಕಿಸಿದರೂ, ಆತ ಹಣ ನೀಡಲು ನಿರಾಕರಿಸಿ ನಂತರ ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿ ಸಂಪರ್ಕದಿಂದ ತಪ್ಪಿಸಿಕೊಂಡಿದ್ದಾನೆ.
ಈ ಹಿನ್ನೆಲೆಯಲ್ಲಿ, ತೆರೆಸಾ ಮೆಂಡೊನ್ಸಾ ಅವರು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.