Home Mangalorean News Kannada News ಕೃಷಿ, ನೀರಾವರಿ, ರೈತರ ಅಭಿವೃದ್ಧಿ ಆದ್ಯತೆ, ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಬದ್ಧ- ಸಿದ್ದರಾಮಯ್ಯ

ಕೃಷಿ, ನೀರಾವರಿ, ರೈತರ ಅಭಿವೃದ್ಧಿ ಆದ್ಯತೆ, ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಬದ್ಧ- ಸಿದ್ದರಾಮಯ್ಯ

Spread the love

ಕೃಷಿ, ನೀರಾವರಿ, ರೈತರ ಅಭಿವೃದ್ಧಿ ಆದ್ಯತೆ, ಸಾಮಾಜಿಕ ನ್ಯಾಯಕ್ಕೆ ಸರ್ಕಾರ ಬದ್ಧ- ಸಿದ್ದರಾಮಯ್ಯ

ಕೊಪ್ಪಳ : ರೈತ ಸ್ವಾವಲಂಬಿಯಾಗದಿದ್ದರೆ, ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಕೃಷಿ, ನೀರಾವರಿ ಮತ್ತು ರೈತರ ಅಭಿವೃದ್ಧಿಗೆ ಆದ್ಯತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಉತ್ತರ ಕರ್ನಾಟಕದ 12 ಜಿಲ್ಲೆಗಳ ಕೃಷಿ ಭಾಗ್ಯ ಯೋಜನೆಯ ಸ್ವಾವಲಂಬಿ ಸ್ವಾಭಿಮಾನಿ ರೈತರ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

raitha-samavesha-koppal-00

ರೈತ ಸಮಾವೇಶ ಸಂದರ್ಭದಲ್ಲಿ ಮಳೆ ಬಂದಿದ್ದರಿಂದ, ಮಳೆ ರೈತರಿಗೆ ಶುಭ ಸಂಕೇತವಾಗಿದೆ ಎಂದು ತಮ್ಮ ಮಾತನ್ನು ಪ್ರಾರಂಭಿಸಿದ ಮುಖ್ಯಮಂತ್ರಿಗಳು, 12 ಜಿಲ್ಲೆಗಳಿಂದ ರೈತರು ಬಂದಿದ್ದೀರಿ, ಕೃಷಿ ಸಚಿವರು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಶ್ರಮದಿಂದ ಸಮಾವೇಶ ಅದ್ಭುತ ಯಶಸ್ಸನ್ನು ಕಂಡಿದೆ. ರೈತ ಸಮಾವೇಶವು ಯಾವುದೇ ಪಕ್ಷಕ್ಕೆ ಸೀಮಿತವಾದ ಕಾರ್ಯಕ್ರಮವಾಗಿಲ್ಲ. ಅಲ್ಲದೆ ಈ ಕಾರ್ಯಕ್ರಮವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಿಲ್ಲ. ಇದು ಸ್ವಾವಲಂಬಿ-ಸ್ವಾಭಿಮಾನಿ ರೈತರ ಸಮಾವೇಶವಾಗಿ ಬಿಂಬಿತವಾಗಿದ್ದು ಸಂತೋಷ ತಂದಿದೆ. ನಮ್ಮ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ರೈತರಿಗಾಗಿ ಏನನ್ನು ಮಾಡಿದ್ದೇವೆ ಎಂಬುದನ್ನು ತಿಳಿಸಬೇಕಿತ್ತು. 2015-16 ರಲ್ಲಿ ಮೊದಲ ಬಾರಿಗೆ ನಮ್ಮ ಸರ್ಕಾರ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರ ಆಸಕ್ತಿಯಿಂದ ರೂಪಿತವಾಗಿದ್ದೇ ಕೃಷಿ ಭಾಗ್ಯ ಯೋಜನೆಯಾಗಿದೆ. ಕೃಷಿ ಭಾಗ್ಯ ಯೋಜನೆಯಿಂದ ರಾಜ್ಯದ 01 ಲಕ್ಷ ಕುಟುಂಬಕ್ಕೆ ಅನುಕೂಲವನ್ನು ತಂದಿದೆ ಎಂದರು. ಕೃಷಿ ಹೊಂಡ ಯೋಜನೆ ಅತ್ಯಂತ ಉಪಯುಕ್ತ ಯೋಜನೆಯಾಗಿದೆ ಎಂಬುದಾಗಿ ಕೃಷಿಕರೇ ಹೇಳಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಕೃಷಿ ಭಾಗ್ಯ ಯೋಜನೆಯನ್ನು ರೈತರಿಗೇ ಸಮರ್ಪಣೆ ಮಾಡುತ್ತಿದ್ದೇವೆ.

ಕೃಷಿ ಭಾಗ್ಯ ಯೋಜನೆ ನಿಮಗೆಲ್ಲ ಅನುಕೂಲವನ್ನು ತಂದಿದೆಯೇ ಇಲ್ಲವೋ ಎಂದು ರೈತ ಸಮೂಹಕ್ಕೆ ಮುಖ್ಯಮಂತ್ರಿಗಳು ಕೇಳಿದ ಪ್ರಶ್ನೆಗೆ, ಹೌದು, ಅನುಕೂಲವಾಗಿದೆ ಎಂಬ ಹರ್ಷೋದ್ಘಾರ ರೈತರಿಂದ ಕೇಳಿಬಂದಿತು.

ರೈತ ಸ್ವಾವಲಂಬಿಯಾಗದಿದ್ದರೆ, ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ರೈತರನ್ನು ನಾವು ಮರೆತರೆ, ಆಹಾರ ಉತ್ಪಾದನೆ ಸಾಧ್ಯವಿಲ್ಲ. ರಾಜಸ್ಥಾನ ರಾಜ್ಯ ಬಿಟ್ಟರೆ ಅತಿ ಹೆಚ್ಚು ಒಣಭೂಮಿ ಇರುವುದು ಕರ್ನಾಟಕದಲ್ಲಿಯೇ. ರಾಜ್ಯದಲ್ಲಿ 1. 21 ಲಕ್ಷ ಹೆ. ಕೃಷಿ ಯೋಗ್ಯ ಭೂಮಿ ಇದೆ. ಈ ಪೈಕಿ ಶೇ. 66 ರಿಂದ 70 ರಷ್ಟು ಒಣಭೂಮಿ ಬೇಸಾಯಕ್ಕೆ ಒಳಪಟ್ಟಿದೆ. ಮಳೆಯಾಶ್ರಿತ ರೈತರೇ ಹೆಚ್ಚಾಗಿ ಇರುವುದರಿಂದ, ದೊಡ್ಡ ಸಂಖ್ಯೆಯಲ್ಲಿರುವ ರೈತರ ಅಭಿವೃದ್ಧಿ ನಿಟ್ಟಿನಲ್ಲಿ ನಮ್ಮ ಸರ್ಕಾರ ಅಧ್ಯಯನ ನಡೆಸಿಯೇ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ಪಂಪ್‍ಸೆಟ್, ಸ್ಪ್ರಿಂಕ್ಲರ್ ಅಳವಡಿಸಿಕೊಂಡು ರೈತರು ನೀರು ಬಳಸುತ್ತಿದ್ದಾರೆ. ಒಣಭೂಮಿ ಆಶ್ರಿತ ರೈತರಿಗೆ ಕೃಷಿ ಭಾಗ್ಯ ಯೋಜನೆ ವರದಾನವಾಗಿದ್ದು, ಕೃಷಿ ಭಾಗ್ಯ ಯೋಜನೆಗಾಗಿಯೇ 1121 ಕೋಟಿ ರೂ. ಅನುದಾನವನ್ನು ನಮ್ಮ ಸರ್ಕಾರ ಒದಗಿಸಿದೆ. ಕೃಷಿ ಹೊಂಡ ಮಾಡಿಕೊಂಡಿರುವ ರೈತರು ಕನಿಷ್ಟ 03 ರಿಂದ 08 ಎಕರೆಗೆ ನೀರು ಪೂರೈಸಿಕೊಂಡು, ಬೆಳೆಯನ್ನು ಪಡೆಯುತ್ತಿದ್ದಾರೆ. ಕೃಷಿ ಭಾಗ್ಯ ಯೋಜನೆಯ ಬಗ್ಗೆ ಕೃಷಿಕರೇ ಕೊಂಡಾಡುತ್ತಿದ್ದಾರೆ. ರಾಜ್ಯದಲ್ಲಿ ಕೃಷಿಹೊಂಡ, ಪಾಲಿಹೌಸ್, ನೆರಳು ಪರದೆ ಘಟಕಕ್ಕೆ ವ್ಯಾಪಕ ಬೇಡಿಕೆ ಸಿಗುತ್ತಿದೆ. ಬೇರೆ ಇಲಾಖೆಗೆ ಅನುದಾನದ ಕೊರತೆಯಾದರೂ ಚಿಂತೆಯಿಲ್ಲ, ಕೃಷಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಆರ್ಥಿಕ ಇಲಾಖೆಗೆ ಸೂಚನೆ ನೀಡಲಾಗಿದೆ. ಕೃಷಿ ಇಲಾಖೆಯಿಂದ ಹೆಚ್ಚುವರಿಯಾಗಿ 600 ಕೋಟಿ ರೂ. ಗೆ ಬೇಡಿಕೆ ಸಲ್ಲಿಸಿದ್ದು, ಈಗಾಗಲೆ ಹೆಚ್ಚುವರಿಯಾಗಿ 300 ಕೋಟಿ ರೂ. ಗಳ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಕೃಷಿಕರು ಯಂತ್ರೋಪಕರಣ ಬಳಸಿ : ರೈತ ಸ್ವಾವಲಂಬಿಯಾಗದಿದ್ದರೆ, ನಮ್ಮ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಕೃಷಿಯನ್ನು ನಾವು ಮರೆತರೆ, ಆಹಾರ ಉತ್ಪಾದನೆ ಸಾಧ್ಯವಿಲ್ಲ. ಕೃಷಿ ಯಂತ್ರಧಾರೆ ಕಾರ್ಯಕ್ರಮ ನಮ್ಮ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ. ಲಕ್ಷಾಂತರ ರೈತರಿಗೆ ನಾವು ಕೃಷಿ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆ ದರದಲ್ಲಿ ಒದಗಿಸುತ್ತಿದ್ದೇವೆ. ಎಲ್ಲೆಲ್ಲಿ ಕೃಷಿ ಯಂತ್ರವನ್ನು ಬಳಸಬೇಕಾಗಿದೆಯೋ, ಅಲ್ಲಲ್ಲಿ, ಯಂತ್ರೋಪಕರಣಗಳನ್ನು ರೈತರು ಬಳಸಬೇಕು. ಕಡಿಮೆ ಖರ್ಚು, ಅಧಿಕ ಇಳುವರಿ ಇದೇ ರೈತರ ಮೂಲ ಮಂತ್ರವಾಗಬೇಕು. ಕೃಷಿ ಭಾಗ್ಯ ಯೋಜನೆಯಲ್ಲಿ ಪಾಲಿಹೌಸ್, ನೆರಳು ಪರದೆ ಘಟಕ ಕಾರ್ಯಕ್ರಮ ನೀಡಿದ್ದು, ಕಡಿಮೆ ನೀರನ್ನು ಬಳಸಿ ಎರಡರಿಂದ ನಾಲ್ಕು ಪಟ್ಟು ಹೆಚ್ಚು ಇಳುವರಿ ಪಡೆಯಲು ಇದು ಅತ್ಯುಪಯುಕ್ತ ಯೋಜನೆಯಾಗಿದೆ. ರೈತರು ಇಂತಹ ಯೋಜನೆಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.

ಮೂರು ವರ್ಗದವರ ನೆನೆದು : ದೇಶಕ್ಕೆ ಅನ್ನವನ್ನು ಕೊಡುವ ಅನ್ನದಾತ, ಗಡಿ ಕಾಯುವ ಸೈನಿಕರು ಹಾಗೂ ಶಿಕ್ಷಕ ವರ್ಗ ಈ ಮೂರೂ ವರ್ಗದವರು ನಾಡನ್ನು ಕಟ್ಟುವವರು. ರೈತ ನಮ್ಮ ನಾಡಿಗೆ ಅನ್ನದಾತ, ಮಳೆ, ಬೆಳೆ ಸಮೃದ್ಧಿಯಾಗಿದ್ದರೆ ಅದೇ ಅವರಿಗೆ ಸ್ವರ್ಗ, ಇನ್ಯಾವ ಸಂತೋಷವನ್ನೂ ಅವರು ಬಯಸುವುದಿಲ್ಲ. ಗಡಿ ಕಾಯುವ ಸೈನಿಕರಿಗೂ ಸಹ ಗೌರವಿಸಬೇಕಾದ್ದು ನಮ್ಮ ಕರ್ತವ್ಯವಾಗಿದೆ. ಅದೇ ರೀತಿ ನಾಡಿನ ಭವಿಷ್ಯ ರೂಪುಗೊಳ್ಳುವುದು ಶಿಕ್ಷಕರಿಂದಲೇ ಆದ್ದರಿಂದ ಈ ಮೂರೂ ವರ್ಗ ನಾಡನ್ನು ಕಟ್ಟುವ ಪ್ರಮುಖ ವರ್ಗವಾಗಿದೆ. ದೇಶವನ್ನು ರಕ್ಷಿಸುವವರು ಹಾಗೂ ದೇಶಕ್ಕೆ ಅನ್ನವನ್ನು ನೀಡುವವರು ಅನ್ನದಾತರು ಅದಕ್ಕಾಗಿಯೇ ನಮ್ಮ ಸರ್ಕಾರ ರೈತ ಪರ ಸರ್ಕಾರವಾಗಿದೆ. ಕೃಷಿ ಬೆಳೆಗಳಿಗೆ ಸರಿಯಾದ ಬೆಲೆ ಕೊಡಿಸುವ ಸಲುವಾಗಿಯೇ ಕೃಷಿ ಬೆಲೆ ಆಯೋಗವನ್ನು ರಚಿಸಲಾಗಿದೆ ಎಂದರು.
23 ಲಕ್ಷ ರೈತರಿಗೆ 10 ಸಾವಿರ ಕೊಟಿ ರೂ. ಸಾಲ : ಕಳೆದ ವರ್ಷ ಭೀಕರ ಬರಗಾಲ ರಾಜ್ಯವನ್ನು ಆವರಿಸಿತ್ತು. ರಾಜ್ಯದ 136 ತಾಲೂಕುಗಳಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿತ್ತು. ರೈತರ ಸಮಸ್ಯೆಗಳನ್ನು ಕಣ್ಣಾರೆ ಕಂಡು, ಅವರ ತೊಂದರೆಗಳಿಗೆ ಸ್ಪಂದಿಸುವ ಸಲುವಾಗಿಯೇ 18 ತಾಲೂಕುಗಳಿಗೆ ಭೇಟಿ ಕೊಟ್ಟು, ರೈತರೊಂದಿಗೆ ಚರ್ಚೆ ನಡೆಸಿ, ಸಮಸ್ಯೆಯನ್ನು ಕಂಡುಕೊಂಡೆ. ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುವ ಮೂಲಕ ಈಗಾಗಲೆ ಬೆಳೆ ಪರಿಹಾರವನ್ನು ಸಹ ಕೊಡಲಾಗಿದೆ. 2015 ರ ಸೆ. 30 ರವರೆಗಿನ ಎಲ್ಲ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಾಲ ವಸೂಲಾತಿಯನ್ನು 01 ವರ್ಷ ಕಾಲ ಮುಂದೂಡಲಾಗಿದೆ. ರೈತರ ಆತ್ಮಹತ್ಯೆಗೆ ಪರಿಹಾರ ಮೊತ್ತವನ್ನು 05 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ 2000 ರೂ. ಗಳ ಮಾಸಾಶನವನ್ನು ನೀಡಲಾಗುತ್ತಿದೆ. ಪ್ರಸಕ್ತ ವರ್ಷ 23 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲವನ್ನು ನೀಡಲು ಕ್ರಮ ಕೈಗೊಂಡಿದ್ದು, 10 ಸಾವಿರ ಕೋಟಿ ರೂ. ಗಳ ಸಾಲವನ್ನು ನೀಡಲಾಗುತ್ತಿದೆ. ಇದು ನಮ್ಮ ಸರ್ಕಾರ ರೈತರಿಗಾಗಿ ಕೊಡಮಾಡಿರುವ ಅತ್ಯಲ್ಪ ಕಾಣಿಕೆಯಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ರೈತರು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದ ಸಾಲ 29 ಸಾವಿರ ಕೋಟಿ ರೂ. ಇದೆ. ಕೇಂದ್ರ ಸರ್ಕಾರ ಈ ಪೈಕಿ ಅರ್ಧದಷ್ಟು ಸಾಲವನ್ನು ಮನ್ನಾ ಮಾಡಿದರೆ, ಸೊಸೈಟಿಯಲ್ಲಿ ರೈತರು ಪಡೆದಿರುವ ಸಾಲದ ಪೈಕಿ ಅರ್ಧದಷ್ಟು ಸಾಲವನ್ನು ಮನ್ನಾ ಮಾಡಲು ನಾವು ಬದ್ಧರಿದ್ದೇವೆ ಎಂಬುದಾಗಿ ಮುಖ್ಯಮಂತ್ರಿಗಳು ಹೇಳಿದರು.
ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ; ಕೊಪ್ಪಳ ಏತನೀರಾವರಿ ಯೋಜನೆಗಾಗಿ 1300 ಕೋಟಿ ರೂ. ಗೂ ಹೆಚ್ಚು ಅನುದಾನವನ್ನು ನಮ್ಮ ಸರ್ಕಾರ ಒದಗಿಸಿದೆ. ಮೂರು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಗೆ 30 ಸಾವಿರ ಕೊಟಿ ರೂ. ಗೂ ಹೆಚ್ಚು ಅನುದಾನವನ್ನು ಒದಗಿಸಿದ್ದು, ಒಟ್ಟಾರೆ ಐದು ವರ್ಷಗಳಲ್ಲಿ 60 ಸಾವಿರ ಕೋಟಿ ರೂ. ಗೂ ಹೆಚ್ಚಿನ ಅನುದಾನವನ್ನು ನಮ್ಮ ಸರ್ಕಾರ ಒದಗಿಸಲಿದೆ. ಕೊಪ್ಪಳ ಮತ್ತು ಯಲಬುರ್ಗಾ ತಾಲೂಕುಗಳ ಕೆರೆ ತುಂಬಿಸುವ ಯೋಜನೆ, ಕೃಷ್ಣಾ ಮೂರನೆ ಹಂತದ ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಿ, ಹಾಗೂ ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ಕುರಿತಂತೆ ಶೀಘ್ರದಲ್ಲಿಯೇ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ನುಡಿದಂತೆ ನಡೆದಿದ್ದೇವೆ : ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಜನರಿಗೆ ನೀಡಿದ್ದ 165 ಭರವಸೆಗಳ ಪೈಕಿ ಈಗಾಗಲೆ 125 ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸುವ ಮೂಲಕ ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ. ದೇವರಾಜ ಅರಸು ಅವರ ಕಾಲದಲ್ಲಿ ಪ್ರಾರಂಭವಾದ ಬದಲಾವಣೆಯ ಪರ್ವವನ್ನು ನಮ್ಮ ಸರ್ಕಾರವೂ ಕೂಡ ಮುಂದುವರೆಸಿದೆ. ಜನರ ನಿರೀಕ್ಷೆಗೆ ತಕ್ಕಂತೆ ನಾವು ನಡೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಕಾರ್ಯಕ್ರಮ ಕುರಿತು ಮಾತನಾಡಿದರು. ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಸಹಕಾರ ಸಚಿವ ಹೆಚ್.ಎಸ್. ಮಹದೇವಪ್ರಸಾದ್, ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ, ಜಿ.ಪಂ. ಅಧ್ಯಕ್ಷ ಶೇಖರಪ್ಪ ಬಿ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ, ಭೀಮಾ ನಾಯಕ್, ಜಿ.ಎಸ್. ಪಾಟೀಲ್, ಡಿ.ಆರ್. ಯಾವಗಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಶ್ರೀನಿವಾಸ್ ಮಾನೆ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಸೇರಿದಂತೆ ಹಲವು ಗಣ್ಯಾತಿಗಣ್ಯರು, ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು. ಕೃಷಿ ಆಯುಕ್ತ ಪಾಂಡುರಂಗ ನಾಯಕ್ ಸ್ವಾಗತಿಸಿದರು.

ಸಮಾವೇಶಕ್ಕೆ ಹರಿದು ಬಂದ ಸ್ವಾವಲಂಬಿ-ಸ್ವಾಭಿಮಾನಿ ರೈತ ಸಾಗರ
ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕೃಷಿ ಭಾಗ್ಯ ಯೋಜನೆ ಉತ್ತರ ಕರ್ನಾಟಕದ 12 ಜಿಲ್ಲೆಗಳ ರೈತ ಫಲಾನುಭವಿಗಳ ಸಮಾವೇಶಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾವಲಂಬಿ-ಸ್ವಾಭಿಮಾನಿ ರೈತ ಸಾಗರ ಹರಿದು ಬಂದಿತು.

ಕೊಪ್ಪಳ ನಗರದ ಹೊರ ವಲಯದಲ್ಲಿನ ವಿಶಾಲವಾದ ಮೈದಾನದಲ್ಲಿ ಸೋಮವಾರದಂದು ಆಯೋಜಿಸಲಾಗಿದ್ದ ಸ್ವಾವಲಂಬಿ-ಸ್ವಾಭಿಮಾನಿ ರೈತ ಫಲಾನುಭವಿಗಳ ಸಮಾವೇಶಕ್ಕೆ ರೈತ ಸಾಗರವೇ ಹರಿದು ಬಂದಿತು. ಉತ್ತರ ಕರ್ನಾಟಕದ 12 ಜಿಲ್ಲೆಗಳ ಸುಮಾರು 25 ರಿಂದ 30 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆಯನ್ನು ಕಾರ್ಯಕ್ರಮದ ಆಯೋಜಕರು ಇಟ್ಟುಕೊಂಡಿದ್ದರು. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದ್ದು ಮಾತ್ರ ರೈತರು. ಸುಮಾರು 40 ರಿಂದ 50 ಸಾವಿರ ರೈತರು ಸಮಾವೇಶದಲ್ಲಿ ಪಾಲ್ಗೊಂಡಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು. ಇದಕ್ಕೆ ಕಾರಣವೂ ಇಲ್ಲದಿಲ್ಲ. ರಾಜ್ಯದಲ್ಲಿ ಮಳೆಯನ್ನೇ ಆಶ್ರಯಿಸಿರುವ ರೈತರ ಸಂಖ್ಯೆ ಶೇ. 70 ರಷ್ಟಿದೆ. ಈ ರೈತರ ಸುಸ್ಥಿರ ಕೃಷಿ ಬದುಕಿಗಾಗಿ ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆಯಡಿ ಜಾರಿಗೊಳಿಸಿರುವ ಕೃಷಿ ಹೊಂಡ, ಪಾಲಿ ಹೌಸ್, ನೆರಳು ಪರದೆ ಘಟಕ ಮುಂತಾದ ಕಾರ್ಯಕ್ರಮಗಳು ಅದ್ಭುತ ಯಶಸ್ಸನ್ನು ಕಂಡಿವೆ. ರೈತರೂ ಸಹ ಈ ಯೋಜನೆಗೆ ಮಾರು ಹೋಗಿದ್ದಾರೆ. ರಾಜ್ಯದಲ್ಲಿ ಪದೇ ಪದೇ ಆವರಿಸುತ್ತಿರುವ ಬರ ಪರಿಸ್ಥಿತಿ, ಕೃಷಿಕರನ್ನು ಕಂಗೆಡಿಸಿದೆ. ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆದು, ನಿಲ್ಲಿಸುವಂತಹ ಕೃಷಿ ಹೊಂಡ ಯೋಜನೆ ರೈತರನ್ನು ಹೆಚ್ಚು ಆಕರ್ಷಿಸಿದೆ. ಈ ಯೋಜನೆಯಿಂದ ಮಳೆ ವಿಫಲವಾದರೂ, 03 ರಿಂದ 08 ಎಕರೆಯಷ್ಟು ಜಮೀನಿನ ಬೆಳೆಯನ್ನು ಕೃಷಿ ಹೊಂಡದ ನೀರನ್ನು ಬಳಸಿಕೊಂಡು, ಉಳಿಸಿಕೊಂಡು, ಉತ್ತಮ ಬೆಳೆ ಪಡೆಯಲು ಅವಕಾಶವಿದೆ. ಇನ್ನು ಪಾಲಿಹೌಸ್ ಮತ್ತು ನೆರಳು ಪರದೆ ಘಟಕವೂ ಕೂಡ ಅತ್ಯಲ್ಪ ನೀರನ್ನು ಮಾತ್ರ ಬಳಸಿಕೊಂಡು ಮೂರು ಪಟ್ಟು ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುವಂತಹ ಯೋಜನೆ. ಇದೂ ಸಹ ರೈತರ ಮನಸೂರೆಗೊಂಡಿದೆ. ರೈತ ಫಲಾನುಭವಿಗಳ ಸಮಾವೇಶ ಸ್ಥಳದಲ್ಲಿ ಕೃಷಿ ಭಾಗ್ಯದ ಈ ಎಲ್ಲ ಯೋಜನೆಗಳ ಲೈವ್ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು. ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಅನೇಕ ಕಂಪನಿಗಳು ಇಲ್ಲಿ ಪ್ರದರ್ಶನಕ್ಕೆ ಇಟ್ಟು, ಅದರ ಬಳಕೆಯ ಬಗ್ಗೆಯೂ ರೈತರಿಗೆ ತೋರಿಸಲು ವ್ಯವಸ್ಥೆಗೊಳಿಸಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭತ್ತ ನಾಟಿ ಯಂತ್ರವನ್ನು ತಾವೇ ಏರಿ, ಯಂತ್ರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕುತೂಹಲದಿಂದ ಗಮನಿಸಿದರು. ಈ ಸಂದರ್ಭದಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಿದರು.

ರೈತ ಸಮಾವೇಶಕ್ಕಾಗಿ ತೆರೆಯಲಾಗಿದ್ದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಮಾಹಿತಿಯನ್ನು ಪಡೆದರು. ನಂತರ ಭತ್ತದ ಬಂಡಲ್ ಕಟ್ಟುವ ಯಂತ್ರ, ಜಲಾನಯನ ಗ್ರಾಮ ಮಾದರಿ, ಪಾಲಿಹೌಸ್ ಮುಂತಾದ ಘಟಕಗಳಿಗೆ ಭೇಟಿ ನೀಡಿದರು. ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಮುಖ್ಯಮಂತ್ರಿಗಳ ಜೊತೆಗಿದ್ದು, ಸಮಗ್ರ ಮಾಹಿತಿ ನೀಡಿದರು. ಸಮಾವೇಶ ಆಯೋಜನೆಯ ವ್ಯವಸ್ಥೆಯ ಬಗ್ಗೆ ಮುಖ್ಯಮಂತ್ರಿಗಳು ಮೆಚ್ಚುಗೆಯ ಮಾತುಗಳನ್ನಾಡಿದರು.

ಕೃಷಿ ಭಾಗ್ಯ ಯೋಜನೆ ಸಾಕ್ಷ್ಯಚಿತ್ರದ ಸಿ.ಡಿ. ಮುಖ್ಯಮಂತ್ರಿಗಳಿಂದ ಬಿಡುಗಡೆ

ಕೃಷಿ ಭಾಗ್ಯ ಯೋಜನೆ, ಕೃಷಿ ಯಂತ್ರಧಾರೆ ಮತ್ತು ಮಣ್ಣು ಆರೋಗ್ಯ ಅಭಿಯಾನ ಯೋಜನೆ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಯಾರಿಸಿದ ಸಾಕ್ಷ್ಯಚಿತ್ರದ ಸಿ.ಡಿ. ಯನ್ನು ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಕೊಪ್ಪಳದಲ್ಲಿ ಬಿಡುಗಡೆ ಮಾಡಿದರು.
ಕೃಷಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಸಹಯೋಗದಲ್ಲಿ ಕೊಪ್ಪಳದಲ್ಲಿ ಆಯೋಜಿಸಲಾಗಿದ್ದ ಸ್ವಾವಲಂಬಿ-ಸ್ವಾಬಿಮಾನಿ ರೈತರ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಸಾಕ್ಷ್ಯಚಿತ್ರದ ಸಿಡಿ ಬಿಡುಗಡೆ ಮಾಡಿದರು. ಕೃಷಿ ಸಚಿವ ಕೃಷ್ಣ ಭೈರೇಗೌಡ, ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್, ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ, ಜಿ.ಪಂ. ಅಧ್ಯಕ್ಷ ಶೇಖರಪ್ಪ ಬಿ ನಾಗರಳ್ಳಿ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ತಂಗಡಗಿ, ಇಕ್ಬಾಲ್ ಅನ್ಸಾರಿ, ಭೀಮಾ ನಾಯಕ್, ಜಿ.ಎಸ್. ಪಾಟೀಲ್, ಡಿ.ಆರ್. ಯಾವಗಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಶ್ರೀನಿವಾಸ್ ಮಾನೆ, ಕೃಷಿ ಆಯುಕ್ತ ಪಾಂಡುರಂಗ ನಾಯಕ್ ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಜಿಲ್ಲಾಧಿಕಾರಿ ಎಂ. ಕನಗವಲ್ಲಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಸೇರಿದಂತೆ ಹಲವು ಗಣ್ಯಾತಿಗಣ್ಯರು, ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.


Spread the love

Exit mobile version